ಜಗತ್ತಿನ ಅತಿ ಉದ್ದವಾದ ವಿಷಪೂರಿತ ಹಾವಾದ ಕಾಳಿಂಗ ಸರ್ಪವು ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ರಾಜ್ಯದ ಸಿರ್ಮೌರ್ ಜಿಲ್ಲೆಯ ಗಿರಿನಗರ ಪ್ರದೇಶದ ಪವೋಂಟಾ ಸಾಹಿಬ್ ಬಳಿಯ ಗುಡ್ಡೆಯೊಂದರ ಮೇಲೆ ಕಾಳಿಂಗ ಸರ್ಪವೊಂದು ಹರಿದುಹೋಗುವುದು ಕಂಡುಬಂದಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಸ್ಥಳೀಯ ನಿವಾಸಿಯೊಬ್ಬರು ಈ ಹಾವನ್ನು ಮೊದಲ ಬಾರಿಗೆ ಕಂಡಿದ್ದು, ಅದರ ಚಿತ್ರವನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಹಂಚಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಇಲಾಖೆ ಸಿಬ್ಬಂದಿ ಹಾವು ಚಲಿಸಿದ ಪಥದ ಚಹರೆಗಳನ್ನು ಗಮನಿಸಿ ಕಾಳಿಂಗ ಸರ್ಪದ ಇರುವಿಕೆಯನ್ನು ಖಾತ್ರಿ ಪಡಿಸಿಕೊಂಡಿದೆ.
ಈ ಹಿಂದೆ ಪಕ್ಕದ ಉತ್ತರಾಖಂಡದಲ್ಲಿ ಕಂಡುಬಂದಿದ್ದ ಕಾಳಿಂಗ ಸರ್ಪ ಇದೇ ಮೊದಲ ಬಾರಿಗೆ ಹಿಮಾಲಯದ ರಾಜ್ಯದಲ್ಲಿ ಕಾಣಿಸಿಕೊಂಡಿದೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅರ್ಚನಾ ಶರ್ಮಾ ತಿಳಿಸಿದ್ದಾರೆ.