ನವದೆಹಲಿ: ಭಾರತದ ಲಸಿಕೆ ಅಭಿಯಾನಕ್ಕೆ ಇನ್ನಷ್ಟು ವೇಗ ಸಿಗಲಿದೆ. ಇದಕ್ಕೆ ಕೆಲವು ಇತಿಮಿತಿಗಳು ಕೂಡ ಇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ದೇಶದಲ್ಲಿ ಲಸಿಕೆ ಉತ್ಪಾದನೆ ಇನ್ನಷ್ಟು ವೇಗ ನೀಡಲಾಗುವುದು. 7 ಕಂಪನಿಗಳು ಉತ್ಪಾದಿಸುತ್ತಿದ್ದು, ಇನ್ನು ಮೂರು ಕಂಪನಿಗಳು ಪ್ರಯೋಗದ ಹಂತದಲ್ಲಿವೆ. ಎರಡು ಲಸಿಕೆಗಳ ಪ್ರಯೋಗ ಬಹಳ ವೇಗವಾಗಿ ನಡೆಯುತ್ತಿದೆ. ನೇಸಲ್ ವ್ಯಾಕ್ಸಿನ್ ಪ್ರಯೋಗವು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ವ್ಯಾಕ್ಸಿನ್ ಉತ್ಪಾದನೆ ಜೊತೆಗೆ ನೀಡಿಕೆ ಪ್ರಕ್ರಿಯೆಯೂ ಚುರುಕುಗೊಂಡಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಲಸಿಕೆಯನ್ನು ಉತ್ಪಾದಿಸಲಾಗುತ್ತಿದೆ. ಭಾರತದ ಲಸಿಕ ಅಭಿಯಾನಕ್ಕೆ ದೊಡ್ಡ ವೇಗ ಸಿಗಲಿದೆ. ಜಗತ್ತಿನ ಹಲವು ದೇಶಗಳಲ್ಲಿ ವ್ಯಾಕ್ಸಿನೇಷನ್ ನಿಧಾನಗತಿಯಲ್ಲಿದೆ. ಲಸಿಕೆ ಉತ್ಪಾದನೆಯಾದರೂ ನೀಡಿಕೆ ನಿಧಾನವಾಗಿದೆ. ಭಾರತದಲ್ಲಿ ವ್ಯಾಕ್ಸಿನೇಷನ್ ವೇಗ ಮತ್ತಷ್ಟು ಹೆಚ್ಚಾಗಿದೆ ಎಂದು ಮೋದಿ ಹೇಳಿದ್ದಾರೆ.
ವ್ಯಾಕ್ಸಿನೇಷನ್ ನಂತರ ಜನ ಧೈರ್ಯದಿಂದ ಇದ್ದಾರೆ. ಕೊರೋನಾ ವಾರಿಯರ್ಸ್ ಲಸಿಕೆ ಪಡೆದು ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಲಸಿಕೆ ಅಭಿವೃದ್ಧಿಯಾದ ಬಳಿಕ ಶ್ರೀಮಂತ ದೇಶಗಳಲ್ಲಿ ಲಸಿಕೆ ನೀಡಿಕೆ ಆರಂಭವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ನೀಡಲು ಮಾರ್ಗಸೂಚಿ ನೀಡಿತ್ತು. ಕೊರೊನಾ ಅಪಾಯ ಹೆಚ್ಚಾಗಿರುವವರಿಗೆ ಮೊದಲು ಲಸಿಕೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ನೀಡದಿದ್ದರೆ ಏನಾಗುತ್ತಿತ್ತು? ಎರಡನೇ ಅಲೆಗೂ ಮೊದಲು ಲಸಿಕೆ ನೀಡದೆ ಇದ್ದರೆ ಏನಾಗುತ್ತಿತ್ತು? ಕೇಂದ್ರ ಸರ್ಕಾರದ ಮುಂದೆ ಹಲವು ಸಲಹೆಗಳು ಬಂದಿವೆ. ಇದುವರೆಗೆ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಆದರೂ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಹಲವರು ಪ್ರಶ್ನಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ.