ಕೊರೊನಾ ಕಾರಣಕ್ಕೆ ಐಪಿಎಲ್ ನ ಉಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ಬಿಸಿಸಿಐಗೆ ಒಪ್ಪಿಗೆ ಸಿಕ್ಕಿದೆ. ಮೇ ತಿಂಗಳಿನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾದ ಕಾರಣ ಪಂದ್ಯವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಐಪಿಎಲ್ ಪಂದ್ಯದ ನಂತ್ರ ಟಿ-20 ವಿಶ್ವಕಪ್ ಬಗ್ಗೆಯೂ ಬಿಸಿಸಿಐ ಚಿಂತನೆ ನಡೆಸುತ್ತಿದೆ.
ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯುವ ಟಿ 20 ವಿಶ್ವಕಪ್ ಪಂದ್ಯಗಳ ಹೊಣೆ ಭಾರತದ ಮೇಲಿದೆ. ಕೊರೊನಾ ವೈರಸ್‌ನಿಂದಾಗಿ ಭಾರತದಲ್ಲಿ ಟಿ 20 ವಿಶ್ವಕಪ್ ನಡೆಸುವುದು ಕಷ್ಟವೆನ್ನಲಾಗ್ತಿದೆ. ಯುಎಇ ಹೊರತುಪಡಿಸಿ, ಬಿಸಿಸಿಐ ಶ್ರೀಲಂಕಾದಲ್ಲಿ ಟಿ 20 ವಿಶ್ವಕಪ್ ಆಯೋಜಿಸುವ ಸಾಧ್ಯತೆಯಿದೆ.
ಟಿ 20 ವಿಶ್ವಕಪ್ ಸಂಘಟನೆಯ ಬಗ್ಗೆ ಬಿಸಿಸಿಐ, ಶ್ರೀಲಂಕಾ ಜೊತೆ ಮಾತುಕತೆ ನಡೆಸುತ್ತಿದೆ. ಜೂನ್ 1 ರಂದು ನಡೆದ ಐಸಿಸಿ ಸಭೆಯಲ್ಲಿ, ಟಿ 20 ವಿಶ್ವಕಪ್ ಆತಿಥ್ಯ ವಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಬಿಸಿಸಿಐಗೆ ಜೂನ್ 28 ರವರೆಗೆ ಸಮಯ ನೀಡಲಾಗಿದೆ.
ಬಿಸಿಸಿಐ ಅಧಿಕಾರಿಯೊಬ್ಬರು ಟಿ 20 ವಿಶ್ವಕಪ್ ಆಯೋಜಿಸುವ ಬಗ್ಗೆ ಬಿಸಿಸಿಐ ಮತ್ತು ಯುಎಇ ನಡುವೆ ಚರ್ಚೆಗಳು ನಡೆಯುತ್ತಿವೆ. ಆದರೆ ಐಪಿಎಲ್ ಹೊರತುಪಡಿಸಿ ಯುಎಇಯಲ್ಲಿ ಇನ್ನೂ ಹಲವು ಪಂದ್ಯಗಳು ನಡೆಯಲಿವೆ. ಟಿ 20 ವಿಶ್ವಕಪ್ ಭಾರತದಲ್ಲಿ ನಡೆಯದೆ ಹೋದ್ರೂ ಆಯೋಜನೆ ಹಕ್ಕನ್ನು ಬಿಸಿಸಿಐ ಉಳಿಸಿಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.