ಬೆಂಗಳೂರು: ವರಿಷ್ಠರು ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ ಎಂಬ ಸಿಎಂ ಬಿ.ಎಸ್. ಯಡಿಯೂರಪ್ಪನವರ ಹೇಳಿಕೆ ಬೆನ್ನಲ್ಲೇ ಬಿಜೆಪಿ ರಾಜ್ಯ ನಾಯಕರು ಯಡಿಯೂರಪ್ಪನವರನ್ನು ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ.
ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ಎಂಬ ಸಿಎಂ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಈ ನಡುವೆ ಸಿಎಂ ನಿವಾಸಕ್ಕೆ ದೌಡಾಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರ್. ಅಶೋಕ್, ಸಿ.ಟಿ. ರವಿ ಮೊದಲಾದವರು ಸಿಎಂ ಜೊತೆ ಚರ್ಚೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಸಚಿವ ಆರ್. ಅಶೋಕ್, ಪದೇ ಪದೇ ನಾಯಕತ್ವ ಬದಲಾವಣೆ ಪ್ರಶ್ನೆ ಸಿಎಂ ಮನಸ್ಸಿಗೆ ನೋವಾಗಿರಬಹುದು. ಹಾಗಾಗಿ ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ಎಂದಿದ್ದಾರೆ. ಯಡಿಯೂರಪ್ಪನವರೇ ನಮ್ಮ ಸರ್ವ ಸಮ್ಮತ ನಾಯಕರು. ಈ ಬಗ್ಗೆ ರಾಜ್ಯದ ನಾಯಕರಿಗಾಗಲೀ, ಬಿಜೆಪಿ ಹೈಕಮಾಂಡ್ ಗಾಗಲಿ ಯಾವುದೇ ಗೊಂದಲವಿಲ್ಲ ಎಂದರು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೆಲ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಮನೆಯಿಂದಲೇ ಹೊರಬರುತ್ತಿಲ್ಲ. ಆದರೆ ನಮ್ಮ ಸಿಎಂ ಹಗಲು ರಾತ್ರಿ ಎನ್ನದೇ ಜನರ ಹಿತಕ್ಕಾಗಿ ತಾವೇ ಹೊರಬಂದು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಆಸ್ಪತ್ರೆಗಳಿಗೆ ತೆರಳಿ ಸ್ವತಃ ಪರಿಶೀಲನೆ ನಡೆಸುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸಿ ನೆರವಾಗಲು ಎರಡು ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಪಕ್ಷಕ್ಕಾಗಿ ಹಾಗೂ ರಾಜ್ಯದ ಹಿತಕ್ಕಾಗಿ ಹಗಲಿರುಳೆನ್ನದೇ ದುಡಿಯುತ್ತಿದ್ದಾರೆ ಆದರೂ ಕೆಲವರಿಂದ ತಾವೇ ಮುಂದಿನ ಸಿಎಂ ಎಂಬಂತಹ ಹೇಳಿಕೆ ಅವರ ಮನಸ್ಸಿಗೆ ನೋವು ತಂದಿದೆ. ಇನ್ಮುಂದೆ ನಾಯಕತ್ವ ಬದಲಾವಣೆಯ ಯಾವುದೆ ಚರ್ಚೆಗೆ ಆಸ್ಪದವಿಲ್ಲ. ಎಲ್ಲವೂ ಇಂದಿಗೆ ಕೊನೆಯಾಗಿದೆ. ಯಡಿಯೂರಪ್ಪನವರೇ ನಮ್ಮ ನಾಯಕರು ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.