ಹೆಣ್ಣುಮಕ್ಕಳನ್ನು ಹೆತ್ತ ಪೋಷಕರಿಗೆ ವಿಶಿಷ್ಟ ಸ್ಕೀಂ ಒಂದನ್ನು ತಂದಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಅವರ ಮದುವೆಗೆಂದು ಹಣವನ್ನು ಹೂಡಿಕೆ ಮಾಡಲು ಅವಕಾಶ ಕೊಟ್ಟಿದೆ.
ದೇಶದ ಅತಿ ದೊಡ್ಡ ವಿಮಾ ಕಂಪನಿಯು ಎಲ್‌ಐಸಿ ಕನ್ಯಾದಾನ್ ಪಾಲಿಸಿಯನ್ನು ತಂದಿದ್ದು, ಹೆಣ್ಣು ಮಕ್ಕಳ ಭವಿಷ್ಯಕ್ಕೆ, ಅದರಲ್ಲೂ ಮದುವೆಯನ್ನು ಗಮನದಲ್ಲಿಟ್ಟುಕೊಂಡು ಈ ಸ್ಕೀಂ ಅನ್ನು ರೂಪಿಸಲಾಗಿದೆ.
ಈ ಪಾಲಿಸಿಯಡಿ ನೀವು ಮೂರು ವರ್ಷಗಳಷ್ಟು ಕಾಲ ಮಾತ್ರವೇ ಪ್ರೀಮಿಯಂ ಪಾವತಿ ಮಾಡಬೇಕಿದ್ದು, ಮೆಚ್ಯೂರಿಟಿಯ ಕಾಲಘಟ್ಟದಲ್ಲಿ ರಿಟರ್ನ್ಸ್ ಪಡೆದುಕೊಳ್ಳಬಹುದಾಗಿದೆ. ಹೂಡಿಕೆದಾರರು ಮೂರು ವರ್ಷಗಳ ಮಟ್ಟಿಗೆ 50000ರೂ./ವರ್ಷದಂತೆ ಹೂಡಿಕೆ ಮಾಡಬೇಕಾಗುತ್ತದೆ.
ಹೂಡಿಕೆದಾರರು ಕನಿಷ್ಠ 30 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಹೂಡಿಕೆದಾರರ ಮಗಳಿಗೆ ಕನಿಷ್ಟ ಒಂದು ವರ್ಷ ವಯಸ್ಸಾಗಿರಬೇಕು ಎಂಬುದು ಗಮನದಲ್ಲಿಡಬೇಕಾದ ಷರತ್ತಾಗಿದೆ.
ಕನಿಷ್ಠ 13 ವರ್ಷಗಳ ಮೆಚ್ಯೂರಿಟಿ ಅವಧಿ ಇರುವ ಎಲ್‌ಐಸಿ ಕನ್ಯಾದಾನ ಪಾಲಿಸಿಯ ಪ್ರೀಮಿಯಂಗಳು ಹೂಡಿಕೆಯ ಮೊತ್ತಗಳನ್ನು ಅವಲಂಬಿಸಿವೆ.
ನಿಮ್ಮ ಆಧಾರ್ ಕಾರ್ಡ್, ಆಧಾರ್ ಪ್ರಮಾಣ ಪತ್ರ, ಗುರುತಿನ ಚೀಟಿ, ಜನನ ಪ್ರಮಾಣಪತ್ರಗಳನ್ನು ಈ ವೇಳೆ ಸಲ್ಲಿಸಬೇಕಾಗುತ್ತದೆ.
ಒಂದು ವೇಳೆ ನೀವು ಒಟ್ಟಾರೆ 10 ಲಕ್ಷ ರೂ.ಗಳನ್ನು ಹೂಡಿಕೆ ಮಾಡಲು ಬಯಸುತ್ತಿರುವಿರಾದರೆ, 22 ವರ್ಷಗಳ ಮಟ್ಟಿಗೆ ನೀವು ಮಾಸಿಕ 3,901 ರೂ.ಗಳನ್ನು ಕಟ್ಟಬೇಕಾಗುತ್ತದೆ. ಇದಾದ ಮೂರು ವರ್ಷಗಳ ಬಳಿಕ ನಿಮಗೆ ಮೆಚ್ಯೂರಿಟಿಯ ಅವಧಿಯಲ್ಲಿ 26.75 ಲಕ್ಷ ರೂ.ಗಳು ಸಿಗಲಿವೆ.
ಎಲ್‌ಐಸಿ ಕನ್ಯಾದಾನ ಪಾಲಿಸಿಯಡಿ ಹೂಡಿಕೆದಾರರಿಗೆ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 80ಸಿಸಿ ಅಡಿ 1.5 ಲಕ್ಷ ರೂ.ಗಳವರೆಗೂ ವಿನಾಯಿತಿ ಸಿಗಲಿದೆ.