ಬೆಂಗಳೂರು: ಮಧ್ಯಮ ವರ್ಗದವರು, ಬಡವರ್ಗದವರು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ಎಲ್ಲರಿಗೂ ಕಪ್ಪು ಶಿಲೀಂಧ್ರಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ಹಿಂದೆಯೇ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಘೋಷಿಸಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರಿಗೆ 2-3 ಲಕ್ಷ ರೂ. ಖರ್ಚಾಗಲಿದ್ದು, ಸರ್ಕಾರವೇ ಭರಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಉಚಿತವಾಗಿ ನೀಡಲು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದಡಿ ಚಿಕಿತ್ಸೆ ನೀಡಬೇಕೆಂದು ಸಲಹೆ ಬಂದಿದೆ. ಈ ಕುರಿತು ಮಾತುಕತೆ ನಡೆಸಲಾಗುವುದು ಎಂದರು.
ಆಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಕೇಂದ್ರ ರೂಪಿಸಲಾಗಿದೆ. ಕೋವಿಡ್ ನಿಂದ ಗುಣಮುಖರಾದವರಿಗೆ ಬೇರೆ ಸೋಂಕಿನ ಲಕ್ಷಣ ಕಂಡುಬಂದಾಗ, ಅದಕ್ಕೆ ಬೇಕಾದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಚಿಕಿತ್ಸೆಯ ಕುರಿತು ವೈದ್ಯರಿಗೂ ತರಬೇತಿ ನೀಡಲಾಗುತ್ತಿದೆ. ಗುಣಮುಖರಾದ ಎಲ್ಲರಿಗೂ ಅಡ್ಡ ಪರಿಣಾಮ ಬರುವುದಿಲ್ಲ. ದೀರ್ಘ ಕಾಲ ಐಸಿಯುನಲ್ಲಿರುವವರು, ಹೆಚ್ಚು ಸ್ಟೀರಾಯಿಡ್ ಪಡೆದವರಲ್ಲಿ ಕೆಲವರಿಗೆ ಮಾತ್ರ ದುಷ್ಪರಿಣಾಮವಾಗುತ್ತಿದೆ. ಅದಕ್ಕೆ ಚಿಕಿತ್ಸೆ ನೀಡಲು ಬೇಕಾದ ಸಿದ್ಧತೆ ಮಾಡಲಾಗಿದೆ ಎಂದರು.