ಭೋಪಾಲ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಮಹಿಳಾ ಆಹಾರ ನಿರೀಕ್ಷಕರೊಬ್ಬರಿಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ನಂತರ ದೇವಾಸ್ ಜಿಲ್ಲಾದಿಕಾರಿ ಆರೋಪಿತ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರನ್ನು ಕೆಲಸದಿಂದ ತೆಗೆಯಲು ಆದೇಶಿಸಿದ್ದಾರೆ. ಮಹಿಳಾ ಆಹಾರ ನಿರೀಕ್ಷಕರನ್ನು ತನ್ನ ಕ್ಯಾಬಿನ್ ಗೆ ಕರೆದು ಅಸಭ್ಯವಾಗಿ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಲಾಗಿದೆ. ತನ್ನ ನಾಚಿಕೆಗೇಡಿನ ಕೃತ್ಯದ ನಂತರ ಫುಡ್ ಇನ್ಸ್ಪೆಕ್ಟರ್ ಗೆ ‘ಇದು ಕೇವಲ ಟ್ರೈಲರ್’ ಎಂದು ಆರೋಪಿ ಹೇಳಿದ್ದಾರೆ. ಆತ ಅಶ್ಲೀಲ ಸಂದೇಶಗಳನ್ನು ಕೂಡ ಕಳುಹಿಸಿದ್ದಾರೆ.
ಘಟನೆಯ ಬಳಿಕ ಮಹಿಳಾ ಫುಡ್ ಇನ್ಸ್ಪೆಕ್ಟರ್ ಆತನ ಕ್ಯಾಬಿನ್ ನಿಂದ ಓಡಿ ಹೋಗಿದ್ದಾರೆ. ಬಳಿಕ ತನ್ನ ಗಂಡನಿಗೆ ವಿಷಯ ತಿಳಿಸಿ ಇಬ್ಬರು ಅವರೊಂದಿಗೆ ಮಾತನಾಡಿದಾಗಲೂ ಅವರು ಕೆಟ್ಟದಾಗಿ ವರ್ತಿಸಿದ್ದಾರೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ಅಶ್ಲೀಲ ಚಾಟ್ ಗಳು ಮತ್ತು ಸಂದೇಶಗಳ ಸ್ಕ್ರೀನ್ ಶಾಟ್ ಗಳನ್ನು ಹೊಂದಿದ ದಾಖಲೆ ಸಹಿತ ಜಿಲ್ಲಾಧಿಕಾರಿಗೆ ದೂರು ನೀಡಿರುವುದಾಗಿ ಮಹಿಳಾ ಇನ್ಸ್ಪೆಕ್ಟರ್ ತಿಳಿಸಿದ್ದು, ಘಟನೆಯ ಬಗ್ಗೆ ವರದಿ ಪಡೆದ ದೇವಾಸ್ ಜಿಲ್ಲಾಧಿಕಾರಿ ಡಾ. ಚಂದ್ರಮೌಳಿ ಶುಕ್ಲಾ ಅವರು ಮ್ಯಾಜಿಸ್ಟ್ರೇಟ್ ಅವರನ್ನು ವಜಾಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ತನಿಖೆ ಮುಗಿಸಿ ವರದಿ ಸಲ್ಲಿಸಲಾಗುವುದು. ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎನ್ನಲಾಗಿದೆ.