ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸೇರಿದಂತೆ 50 ಸದಸ್ಯರ ಬ್ಯಾಂಕ್ ಖಾತೆಗಳಿಗೆ 6,000 ರೂ. ಜಮಾ ಮಾಡುವ ಬದಲು 6 ಲಕ್ಷ ರೂಪಾಯಿಯಿಂದ 16 ಲಕ್ಷ ರೂಪಾಯಿವರೆಗೆ ಹಣ ಜಮಾ ಮಾಡಲಾಗಿದೆ.
ಬ್ಯಾಂಕ್ ಸಿಬ್ಬಂದಿ ಎಡವಟ್ಟಿನಿಂದ ಈ ರೀತಿ ಆಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಮಾ ಮಾಡಲಾದ ಹಣವನ್ನು ಮತ್ತೆ ವಾಪಸ್ ತೆಗೆಯಲಾಗಿದೆ. ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್, ಆಡಳಿತ ಪಕ್ಷ ಮತ್ತು ವಿಪಕ್ಷದ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಸೇರಿದಂತೆ 50 ಜನರ ಖಾತೆಗಳಿಗೆ 3 ಕೋಟಿ ರೂಪಾಯಿಗೂ ಅಧಿಕ ಹಣ ಜಮಾ ಮಾಡಲಾಗಿದೆ.
ಮೇಯರ್ ಗೆ 16,000 ರೂ., ಉಪ ಮೇಯರ್ ಗೆ 10,000 ರೂ., ಸದಸ್ಯರಿಗೆ ತಲಾ 6 ಸಾವಿರ ರೂಪಾಯಿ ಜಮಾ ಮಾಡಬೇಕಿತ್ತು. ಆದರೆ, ಬ್ಯಾಂಕ್ ಸಿಬ್ಬಂದಿ ಎಡವಟ್ಟು ಮಾಡಿಕೊಂಡು ಎರಡು ಸೊನ್ನೆ ಹೆಚ್ಚಿಗೆ ಸೇರಿಸಿದ್ದರಿಂದ ಲಕ್ಷಾಂತರ ರೂಪಾಯಿ ಜಮಾ ಆಗಿದೆ. ಕೊನೆಗೆ ಪಾಲಿಕೆಗೆ ಮಾಹಿತಿ ನೀಡಿ, ಸದಸ್ಯರಿಗೆ ತಿಳಿಸಿ ಹಣ ವಾಪಸ್ ಪಡೆಯಲಾಗಿದೆ. ಕೆಲವು ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ.