ನವದೆಹಲಿ: ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸದೆ ಬ್ಲೂ ಟಿಕ್ ತೆಗೆದು ಹಾಕಿದೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆಯ ಬ್ಲೂ ಟಿಕ್ ತೆಗೆದ ಬಗ್ಗೆ ಬಿಜೆಪಿ ಮುಖಂಡ ಸುರೇಶ್ ನಖ್ವಾ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಶೀಲನೆ ನಡೆಸದೇ ಉಪರಾಷ್ಟ್ರಪತಿಗಳ ಟ್ವಿಟರ್ ಹ್ಯಾಂಡಲ್ ನಿಂದ ಏಕೆ ನೀಲಿ ಟಿಕ್ ತೆಗೆದು ಹಾಕಿದೆ ಎಂದು ಪ್ರಶ್ನಿಸಿದ್ದಾರೆ. ಇದು ಭಾರತದ ಸಂವಿಧಾನದ ಮೇಲಿನ ಆಕ್ರಮಣವಾಗಿದೆ ಎಂದು ಕಿಡಿಕಾರಿದ್ದು, ಬಳಕೆದಾರರು ಸಕ್ರಿಯವಾಗಿಲ್ಲ ಎಂದರೆ ಪರಿಶೀಲಿಸದೆ ನೀಲಿ ಟಿಕ್ ತೆಗೆದು ಹಾಕುವುದು ಸರಿಯಲ್ಲ ಎಂದಿದ್ದಾರೆ.
ಇಂತಹ ಸಂದರ್ಭಗಳಲ್ಲಿ ನೀಲಿ ಟಿಕ್ ತೆಗೆದುಹಾಕಲಾಗುತ್ತದೆ
ಟ್ವಿಟರ್ ಸೇವಾ ನಿಯಮಗಳಿಗೆ ಅನುಗುಣವಾಗಿ ಯಾರಾದರೂ ತಮ್ಮ ಹ್ಯಾಂಡಲ್ ಹೆಸರನ್ನು ಬದಲಾಯಿಸಿದರೆ ಅಥವಾ ಯಾರೊಬ್ಬರ ಖಾತೆ ನಿಷ್ಕ್ರಿಯವಾಗಿದ್ದರೆ, ಅಪೂರ್ಣವಾಗಿದ್ದರೆ, ಬಳಕೆದಾರರು ಪರಿಶೀಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ ಅಂತಹ ಕ್ರಮ ಕೈಗೊಳ್ಳಲಾಗುತ್ತದೆ. ಟ್ವಿಟರ್ ಮಾನದಂಡಗಳನ್ನು ಪೂರೈಸದ ಕಾರಣಕ್ಕೆ ನೀಲಿ ಟಿಕ್ ತೆಗೆಯಲಾಗುತ್ತದೆ.
ಇತ್ತೀಚೆಗೆ ಸರ್ಕಾರದ ಹೊಸ ಮಾರ್ಗಸೂಚಿ ಕಾರಣಕ್ಕೆ ಟ್ವಿಟರ್ ಮತ್ತು ಸರ್ಕಾರದ ನಡುವೆ ವಿವಾದ ಉಂಟಾಗಿದೆ. ಹೊಸ ಮಾರ್ಗಸೂಚಿಗೆ ಟ್ವಿಟರ್ ಇನ್ನೂ ಅನುಮೋದನೆ ನೀಡಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ದೆಹಲಿ ಪೊಲೀಸರು ಪರಿಶೀಲನೆಗಾಗಿ ಟ್ವಿಟರ್ ನ ದೆಹಲಿ ಮತ್ತು ಗುರುಗ್ರಾಮದಲ್ಲಿರುವ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.