ಕೊರೊನಾ ಎರಡನೇ ಅಲೆ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ನಿಧಾನವಾಗಿ ಎರಡನೇ ಅಲೆ ಅಬ್ಬರ ಕಡಿಮೆಯಾಗ್ತಿದೆ. ಆದ್ರೆ ಸದ್ಯವೇ ಮೂರನೇ ಅಲೆ ಬರಲಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಮೊದಲು ವೃದ್ಧರು ನಂತ್ರ ಯುವಕರನ್ನು ಬಲಿ ಪಡೆದ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯ ನೀಡಲಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗ್ತಿದೆ.
ಅನೇಕ ದೇಶಗಳಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗ್ತಿದೆ. ಆದ್ರೆ 12 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಲಸಿಕೆ ಬಂದಿಲ್ಲ. ಎಲ್ಲ ಲಸಿಕೆಗಳು ಪ್ರಯೋಗದ ಹಂತದಲ್ಲಿವೆ. ಇದೇ ಕಾರಣಕ್ಕೆ ಮಧ್ಯಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಬರದಂತೆ ತಡೆಯಲು ಪಾಲಕರಿಗೆ ಲಸಿಕೆ ಅಭಿಯಾನ ಶುರು ಮಾಡಿದೆ.
12 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳನ್ನು ಹೊಂದಿರುವ ಪಾಲಕರಿಗೆ ಕೊರೊನಾ ಲಸಿಕೆ ಹಾಕುವಲ್ಲಿ ಆದ್ಯತೆ ನೀಡಬೇಕೆಂದು ಸರ್ಕಾರ ಸೂಚನೆ ನೀಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊರೊನಾ ಕಾಡಿದಲ್ಲಿ ಅವರ ಆರೈಕೆಗೆ ಪಾಲಕರಿರಬೇಕಾಗುತ್ತದೆ. ಅವರಿಗೆ ಲಸಿಕೆಯಾದ್ರೆ ಅವರು ಕೊರೊನಾದಿಂದ ಮುಕ್ತರಾಗಬಹುದೆಂದು ಶಿವರಾಜ್ ಚೌಹಾಣ್ ಹೇಳಿದ್ದಾರೆ.