ಬೆಳಗಾವಿ: ಕಬ್ಬು ಬೆಳೆಗೆ ಬಾಕಿ ಬಿಲ್ ಪಾವತಿಗೆ ಒತ್ತಾಯಿಸಿ, ಬೆಳಗಾವಿ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣ ಸಂಬಂಧ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಖುದ್ದು ಸಿಎಂ ಯಡಿಯೂರಪ್ಪ ಇಂದು ಜಿಲ್ಲೆಗೆ ಭೆಟಿ ನೀಡಲಿದ್ದು, ಸುವರ್ಣಸೌಧದಲ್ಲಿ ಸಭೆ ನಡೆಸಲಿದ್ದಾರೆ. ಈ ನಡುವೆ ರೈತರು ಕಬ್ಬು ಬೆಳೆಗೆ ಬಾಕಿ ಬಿಲ್ ಪಾವತಿಸಲು ಒತ್ತಾಯಿಸಿ ಸುವರ್ಣಸೌಧ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವೊಲಿಕೆ ಯತ್ನ ನಡೆಸಿದ್ದಾರೆ. ಆದರೆ ರೈತರು ಸಿಎಂ ಯಡಿಯೂರಪ್ಪ ಅವರ ಜೊತೆ ಮಾತನಾಡಬೇಕಿದೆ. 1,500 ಕೋಟಿ ಕಬ್ಬಿನ ಬಿಲ್ ಬಾಕಿಯಿದೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಬೇಕಿದೆ. ಅವಕಾಶ ನೀಡಿ ಎಂದು ಹೇಳಿದ್ದಾರೆ. ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಪ್ರತಿಭಟನಾ ನಿರತ ರೈತರನ್ನು ಹಿರೇಬಾಗೇವಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.