ರಾಯಚೂರು: ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಭಾರಿ ಪರಿಣಾಮವನ್ನುಂಟು ಮಾಡಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ ಮೂರನೇ ಅಲೆ ಬರುವ ಮೊದಲೇ ಕೊರೋನಾ ಮತ್ತು ಬ್ಲಾಕ್ ಫಂಗಸ್ ನಿಂದಾಗಿ ಮಕ್ಕಳು ನಲುಗಿ ಹೋಗಿದ್ದಾರೆ. ಇದೇ ಹೊತ್ತಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಂಡಿದೆ.
ಕೊರೋನಾ ಸೋಂಕಿನಿಂದ ಗುಣಮುಖರಾದ 6 ಮಕ್ಕಳಲ್ಲಿ ಬಹು ಅಂಗಾಂಗ ಉರಿಯೂತ, ವಿಪರೀತ ಜ್ವರ ಮೊದಲಾದ ಲಕ್ಷಣಗಳ ‘ಕವಾಸಕಿ’ ರೋಗ ಕಾಣಿಸಿಕೊಂಡಿದೆ. ಸಿಂಧನೂರಿನ ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ 6 ಮಕ್ಕಳಲ್ಲಿ ಕವಾಸಕಿ ರೋಗದ ಲಕ್ಷಣಗಳು ಕಂಡುಬಂದಿವೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರೋನಾ ಸೋಂಕಿನಿಂದ ಗುಣಮುಖರಾದ ಮಕ್ಕಳ ಚರ್ಮದ ಮೇಲೆ ಊತ ಬರುವುದು, ತೀವ್ರತರದ ಜ್ವರ ಕಾಣಿಸಿಕೊಳ್ಳುವುದು ಕವಾಸಕಿ ರೋಗದ ಲಕ್ಷಣಗಳು ಎಂದು ಹೇಳಲಾಗುತ್ತಿದೆ. ಇಂತಹ ಲಕ್ಷಣ ಕಂಡು ಬಂದ ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಿದೆ.
ಮಕ್ಕಳ ತಜ್ಞ ಡಾ. ಕೆ ಶಿವರಾಜ್ ಪಾಟೀಲ್ ಅವರು, ಕವಾಸಕಿ ಸೋಂಕು ತಗುಲಿದ ಮಕ್ಕಳಲ್ಲಿ ಸದ್ಯಕ್ಕೆ ಸೌಮ್ಯ ಲಕ್ಷಣಗಳಿದ್ದು, ಆತಂಕ ಪಡುವ ಅಗತ್ಯವಿಲ್ಲ. ಆದರೆ, ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ನೀಡಬೇಕಿದೆ ಎಂದು ಹೇಳಿದ್ದಾರೆ.
ಕೊರೋನಾ ನಂತರದಲ್ಲಿ ಕವಾಸಕಿ ರೋಗ ಮಕ್ಕಳಲ್ಲಿ ಕಂಡು ಬರುತ್ತಿದೆ. ರೋಗ ಉಲ್ಬಣವಾದಲ್ಲಿ 30 ಸಾವಿರ ರೂ. ಮೌಲ್ಯದ ಇಮ್ಯುನೊಗ್ಲಾಬ್ಯುಲಿನ್ ಇಂಜೆಕ್ಷನ್ ಕೊಡಬೇಕಾಗುತ್ತದೆ ಎಂದು ಹೇಳಲಾಗಿದೆ.