ಶಿವಮೊಗ್ಗ: ಈಗಾಗಲೇ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಕೋವಿಶಿಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಸದ್ಯಕ್ಕೆ ಕೊವ್ಯಾಕ್ಸಿನ್ ಲಸಿಕೆ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ನೀಡಲಾಗುತ್ತಿದೆ.
ಆದರೆ, ಕೋವಿಶೀಲ್ಡ್ ಲಸಿಕೆ ಲಭ್ಯವಿರುವುದರಿಂದ 18 ವರ್ಷ ಮೇಲ್ಪಟ್ಟವರಿಗೆ ಕೂಡ ಮೊದಲ ಡೋಸ್ ನೀಡಲಾಗುತ್ತಿದೆ. ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದ್ದು, ಎರಡು ರೀತಿಯ ದರ ನಿಗದಿಪಡಿಸಲಾಗಿದೆ.
ಅಂದ ಹಾಗೆ, ಸರ್ಕಾರಿ ಲಸಿಕ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳಬೇಕಿದೆ. ಆದರೆ, ಒಂದೇ ಊರಿನ ಆಸ್ಪತ್ರೆಗಳಲ್ಲಿ ಏಕ ರೂಪದ ದರ ನಿಗದಿಪಡಿಸದೇ ವಿಭಿನ್ನ ದರ ನಿಗದಿ ಮಾಡಿರುವುದು ಗೊಂದಲವನ್ನುಂಟು ಮಾಡಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿದೆ.
ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಶೀಲ್ಡ್ ಲಸಿಕೆಗೆ 800 ರೂಪಾಯಿ ದರ ನಿಗದಿಪಡಿಸಿದ್ದು, ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ 680 ರೂಪಾಯಿ ದರ ನಿಗದಿಪಡಿಸಲಾಗಿದೆ. ಕೋವಿನ್ ಆಪ್ ಮೂಲಕ ಲಸಿಕೆ ಪಡೆಯಲು ನೋಂದಾಯಿಸಿಕೊಳ್ಳಬೇಕು. ಆರೋಗ್ಯ ಮಂತ್ರಾಲಯದ ಕೋವಿನ್ ಆಪ್ ನಲ್ಲಿ ಒಂದೇ ಊರಿನ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ವಿಭಿನ್ನ ದರ ನಿಗದಿಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಕೋವಿಶೀಲ್ಡ್ ಲಸಿಕೆಗೆ ಒಂದು ಆಸ್ಪತ್ರೆಯಲ್ಲಿ 800 ರೂ., ಮತ್ತೊಂದು ಆಸ್ಪತ್ರೆಯಲ್ಲಿ 680 ರೂಪಾಯಿ ದರ ನಿಗದಿ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳಲ್ಲೂ ಸರ್ಕಾರವೇ ಲಸಿಕೆಗೆ ಏಕರೂಪದ ದರ ನಿಗದಿಪಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.