ಯುವತಿಯ ಜೊತೆ ಸ್ನೇಹ ಬೆಳೆಸಿದ್ರು ಎಂಬ ಕಾರಣಕ್ಕೆ 20 ವರ್ಷದ ಯುವಕ ಮತ್ತಾತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಅವರ ತಲೆಯನ್ನ ಅರ್ಧ ಬೋಳಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಜಬಲಾಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಯುವತಿಯ ತಂದೆ ಸೇರಿದಂತೆ ನಾಲ್ವರನ್ನ ಬಂಧಿಸಲಾಗಿದೆ.
ಮೇ 22ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಹಲ್ಲೆಗೊಳಗಾದ ರಾಜಕುಮಾರ್ ದೇಹಾರಿಯಾ ದೂರನ್ನ ದಾಖಲಿಸಿದ್ದಾನೆ. ದಲಿತ ವರ್ಗಕ್ಕೆ ಸೇರಿದ್ದ ಯುವಕ ಯಾದವ ಸಮುದಾಯದ 19 ವರ್ಷದ ಯುವತಿಯೊಂದಿಗೆ ಸ್ನೇಹ ಸಂಬಂಧವನ್ನ ಹೊಂದಿದ್ದ.
ಆಕೆ ತನ್ನ ಬಳಿ ಮಾತನಾಡಲು ಫೋನ್ ಇಲ್ಲ ಹಾಗೂ ಮನೆಯಿಂದ ಹೊರ ಬರಲು ಮನೆಯವರು ಬಿಡೋದಿಲ್ಲ ಎಂದು ಹೇಳಿದ್ದಕ್ಕೆ ರಾಜಕುಮಾರ್ ತನ್ನ ಸ್ನೇಹಿತನಿಂದ ಫೋನ್ನ್ನು ಪಡೆದು ಯುವತಿಗೆ ನೀಡಿದ್ದ ಎನ್ನಲಾಗಿದೆ.
ಯುವತಿಯ ತಂದೆಗೆ ಈ ಫೋನ್ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಬಂಧಿಕರ ಜೊತೆ ಸೇರಿ ರಾಜಕುಮಾರ್ ಹಾಗೂ ಆತನ ಸ್ನೇಹಿತರನ್ನ ಥಳಿಸಿದ್ದಾರೆ. ಅಲ್ಲದೇ ಅವರ ತಲೆಯನ್ನ ಅರ್ಧ ಬೋಳಿಸಿ ಚಪ್ಪಲಿಯ ಹಾರವನ್ನ ತೊಡಿಸಿದ್ದಾರೆ ಎಂದು ದೂರುದಾರ ದೂರಿನಲ್ಲಿ ಉಲ್ಲೇಖಿಸಿದ್ದಾನೆ.