ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದೆ. ರೋಗಿಗಳ ಜೀವವನ್ನೇ ಹಿಂಡುತ್ತಿದೆ. ಔಷಧ ಕೊರತೆಯಿಂದಾಗಿ ಈ ಸಮಸ್ಯೆ ಸೃಷ್ಠಿಯಾಗಿದೆ. ಇದು ಹೀಗೇ ಮುಂದುವರೆದರೆ ರೋಗಿಗಳ ಸಾವು ಖಚಿತ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ರಘುರಾಜ್ ಹೆಗಡೆ ಎಚ್ಚರಿಕೆ ನೀಡಿದ್ದಾರೆ.
ಎಂಪೊಟೆರಿಸನ್ ಬಿ ಔಷಧ ಕೊರತೆಯಿಂದ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಸಮಸ್ಯೆಗಳಾಗಿವೆ. ಇದು ಹೀಗೆ ಮುಂದುವರೆದರೆ ರೋಗಿಗಳು ಸಾವನ್ನಪ್ಪುತ್ತಾರೆ. ಬೆಡ್ ಗಳ ಸಮಸ್ಯೆ ಎದುರಾಗಲಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಔಷಧ ತರಿಸಿಕೊಡಬೇಕು, ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದ ರೋಗಿಯ ಒಂದು ಕಣ್ಣನ್ನು ಕಳೆದವಾರ ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದೇವೆ. ಇದೀಗ ಮತ್ತೊಂದು ಕಣ್ಣಿಗೂ ಫಂಗಸ್ ತಗುಲಿದೆ. ಈಗ ಆ ರೋಗಿಯ ಮೆದುಳಿಗೂ ಫಂಗಸ್ ಆವರಿಸಿಕೊಳ್ಳುತ್ತಿದೆ. ಔಷಧ ಕೊರತೆಯೇ ಸಮಸ್ಯೆಗೆ ಕಾರಣವಾಗಿದೆ. ಈ ವಿಷಯವನ್ನು ರೋಗಿಯ ಕುಟುಂಬದವರಿಗೆ ನಾನು ತಿಳಿಸುವುದಾದರೂ ಹೇಗೆ ಎಂದು ಸಂಕಟ ತೋಡಿಕೊಂಡಿದ್ದಾರೆ.