ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಮತ್ತು ವ್ಯಾಸಂಗ ಮಾಡುವವರಿಗೆ ಕೊರೋನಾ ಲಸಿಕೆಯನ್ನು ಆದ್ಯತೆಯ ಮೇಲೆ ನೀಡಲಾಗುತ್ತದೆ.
ಇಂದಿನಿಂದ ಆದ್ಯತಾ ಗುಂಪಿನವರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಡಿಸಿಎಂ, ಲಸಿಕೆ ಕಾರ್ಯಪಡೆ ಅಧ್ಯಕ್ಷ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಇಂದು 3 ಗಂಟೆಗೆ ಈ ವರ್ಗದವರಿಗೆ ಲಸಿಕೆ ನೀಡಲಿದ್ದು, ಲಸಿಕೆ ಪಡೆಯಲು ಆಧಾರ್ ಕಾರ್ಡ್, ಪಾಸ್ಪೋರ್ಟ್, ವಿದೇಶದಲ್ಲಿರುವ ತಮ್ಮ ಕೆಲಸ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.
ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯವಾಗುವಂತೆ ಎರಡನೇ ಡೋಸ್ ಅವಧಿಯನ್ನು 12 ವಾರಗಳಿಂದ ಒಂದು ತಿಂಗಳಿಗೆ ಇಳಿಕೆ ಮಾಡಲಾಗಿದೆ. ಕೋವಿಶೀಲ್ಡ್ ಮೊದಲ ಡೋಸ್ ಪಡೆದವರಿಗೆ ಮಾತ್ರ ಅನ್ವಯವಾಗಲಿದೆ. ಎರಡನೇ ಡೋಸ್ ಪಡೆದ ಕೂಡಲೇ ವ್ಯಾಕ್ಸಿನ್ ನೀಡಿರುವ ಬಗ್ಗೆ ರಾಜ್ಯ ಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಕೂಡ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.