ಒಂದು ದಶಲಕ್ಷ ಜನರನ್ನು ಕೊಲ್ಲಲು ಸಾಕಾಗುವಷ್ಟಾದ ಎರಡು ಕಿಲೋ ಫೆಂಟಾನಿಲ್ ಅನ್ನು ಇಟ್ಟುಕೊಂಡಿದ್ದ ಉತ್ತರ ಕರೋಲಿನಾದ ಮಹಿಳೆಯೊಬ್ಬರನ್ನು ಮೇ 25ರಂದು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಡರ್ಹಾಮ್‌ನ ವಾಟ್ಸ್ ಸ್ಟ್ರೀಟ್ ಬಳಿ 24 ವರ್ಷದ ಕರೇನ್ ಗಾರ್ಸಿಯಾ ಯೂಸೆಡಾ ಹೆಸರಿನ ಮಹಿಳೆಯನ್ನು ಅಡ್ಡಗಟ್ಟಿದ ಪೊಲೀಸರು ಆಕೆಯನ್ನು ಬಂಧಿಸಿ ಸಿಂಥೆಟಿಕ್ ಒಪಿಯಾಯ್ಡ್ ಫೆಂಟನಿಲ್ ಅನ್ನು ಆಕೆಯ ಕಾರಿನಿಂದ ವಶಕ್ಕೆ ಪಡೆದಿದ್ದಾರೆ. ಆ ವೇಳೆ ಕರೆನ್‌ಳ 4 ವರ್ಷದ ಮಗಳೂ ಸಹ ವಾಹನದಲ್ಲಿ ಸಿಕ್ಕಿದ್ದು, ಆಕೆಯನ್ನು ಈಗ ಕುಟುಂಬ ಸದಸ್ಯರ ಸುಪರ್ದಿಗೆ ಒಪ್ಪಿಸಲಾಗಿದೆ.
ಕಳ್ಳಸಾಗಾಟ ಹಾಗೂ ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣದಲ್ಲಿ ಕರೇನ್ ಮೇಲೆ ಆರೋಪ ಹೊರಿಸಲಾಗಿದ್ದು, ಆಕೆಯನ್ನು $100,000 ಬಾಂಡ್ ಮೇಲೆ ಡರ್ಹಾಮ್ ಕೌಂಟಿ ಡಿಟೆನ್ಷನ್ ಕೇಂದ್ರದಲ್ಲಿ ಇಟ್ಟುಕೊಳ್ಳಲಾಗಿದೆ.
ತೀವ್ರವಾದ ನೋವಿಗೆ ಚಿಕಿತ್ಸೆ ನೀಡಲು ಬಳಸುವ ಫೆಂಟನಿಲ್ ಮಾರ್ಫಿನ್‌ಗೆ ಹೋಲಿಕೆ ಇದ್ದರೂ ಸಹ 100 ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿದೆ.
ನೋಂದಾಯಿತ ವೈದ್ಯಕೀಯ ವೃತ್ತಿಪರರ ಸೂಚನೆ ಮೇರೆಗೆ ಮಾತ್ರವೇ ಫೆಂಟನಿಲ್ ಕೊಡಲಾಗುವುದು. ಇದರ ತಪ್ಪಾದ ಬಳಕೆ ಅಥವಾ ದುರ್ಬಳಕೆ ವಿರುದ್ಧ ಕಟ್ಟುನಿಟ್ಟಿನ ಕಾನೂನುಗಳಿವೆ. ಒಂದು ಕೆಜಿ ಫೆಂಟನಿಲ್ ಒಮ್ಮೆಲೇ ಐದು ಲಕ್ಷ ಮಂದಿಯನ್ನು ಕೊಲ್ಲಬಹುದಾಗಿದೆ.