ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೊರೊನಾ ಸೋಂಕಿನ ವಿರುದ್ಧ ಗೆದ್ದುಬಿಟ್ಟೆವು ಎಂದು ಹೇಳಿಕೊಳ್ಳುತ್ತಾ, ಎರಡನೇ ಅಲೆ ಬಗ್ಗೆ ಎಚ್ಚರಿಸಿದರೂ ಮೈಮರೆತು ಕುಳಿತರು. ದೇಶದಲ್ಲಿನ ಜನರ ಸಾವು-ನೋವುಗಳಿಗೆ, ಈಗಿನ ದುಸ್ಥಿತಿಗೆ ಪ್ರಧಾನಿ ಮೋದಿಯೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್ ಡಿ ಎ ಸರ್ಕಾರ 7 ವರ್ಷ ಪೂರೈಸಿದೆ. ಸಾಧನೆ ಮಾಡಿದೆವೆಂದು ಖಾಲಿ ಕೊಡ ಹೊತ್ತು ಬಿಜೆಪಿ ನಾಯಕರು ಸಂಭ್ರಮಿಸುತ್ತಿದ್ದಾರೆ. ದೇಶದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಗಗನಮುಖಿಯಾಗಿದೆ ಚರಿತ್ರೆಯಲ್ಲಿಯೇ ಈ ಮಟ್ಟಕ್ಕೆ ಬೆಲೆ ಏರಿಕೆಯೇ ಆಗಿರಲಿಲ್ಲ. ದೇಶದಲ್ಲಿ ಬೇಡದ ಕಾನೂನುಗಳನ್ನು ಜಾರಿ ಮಾಡಿದ್ದಾರೆ. ಅನಾಹುತಗಳನ್ನು ಮಾಡಿದ್ದೆ ಮೋದಿ ಸರ್ಕಾರದ ಸಾಧನೆಯಾಗಿದೆ. ದೇಶದ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಕೊರೊನಾ ನಿಯಂತ್ರಣಕ್ಕಿಂತ ಪ್ರಧಾನಿ ಮೋದಿಗೆ ಚುನಾವಣೆಗಳೆ ಮುಖ್ಯವಾಯ್ತು. ದೇಶದಲ್ಲಿ ಕೊರೊನಾ ಎರಡನೆ ಅಲೆ ಅಬ್ಬರಕ್ಕೆ ಮೋದಿ, ಅಮಿತ್ ಶಾ ಅವರೇ ಕಾರಣ. ಲಸಿಕೆಯನ್ನು ಮೊದಲು ದೇಶದಲ್ಲಿ ವಿತರಿಸುವುದನ್ನು ಬಿಟ್ಟು ವಿದೇಶಗಳಿಗೆ ರವಾನಿಸಿದರು ಇಂದು ದೇಶದ ಜನರು ಲಸಿಕೆ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣ ಮಾಡಿದರು. ಮೋದಿ ಪ್ರಧಾನಿಯಾದಾಗ ಎಲ್ಲಾ ಬೆಲೆಗಳು ಕಡಿಮೆಯಿತ್ತು. ಲೀಟರ್ ಡೀಸೆಲ್ ಬೆಲೆ 46 ರೂಪಾಯಿ 50 ಪೈಸೆ ಇತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71 ರೂಪಾಯಿ ಇತ್ತು. ಆದರೆ ಇಂದು 100 ರೂಪಾಯಿ ಗಡಿ ತಲುಪಿದೆ. ದೇಶದ ಸಾಲ 53.11 ಲಕ್ಷ ಕೋಟಿ ರೂ ಇತ್ತು.
ಈಗ ದೇಶದ ಸಾಲ 135 ಲಕ್ಷ ಕೋಟಿ ರೂ.ಆಗಿದೆ. ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಜಿಡಿಪಿ ದರವೂ ಕುಸಿದಿದೆ. ಆರ್ಥಿಕವಾಗಿ, ಔದ್ಯೋಗಿಕವಾಗಿ ದೇಶಕ್ಕೆ ಹಿನ್ನಡೆಯಾಗಿದೆ. ಬಂದರುಗಳು, ಕಾರ್ಖಾನೆಗಳು, ಸಂಸ್ಥೆಗಳನ್ನು ಮಾರಾಟ ಮಾಡಿದ್ದಾರೆ. ರೈತರಿಗೆ ಮಾರಕವಾದ ಕೃಷಿ ಕಾನೂನು ಜಾರಿಗೆ ತಂದಿದ್ದಾರೆ. ನೋಟ್ ಬ್ಯಾನ್ ಮಾಡಿ ಏನು ಪ್ರಯೋಜನವಾಯಿತು? ಅನಾಹುತಗಳನ್ನು ಮಾಡಿದ್ದೇ ಮೋದಿ ಸಾಧನೆಯಾಗಿದೆ ನಾನು ಯಾವುದನ್ನೂ ಆರೋಪ ಮಾಡುತ್ತಿಲ್ಲ. ವರದಿಗಳನ್ನು ಆಧರಿಸಿಯೇ ಹೇಳುತ್ತಿದ್ದೇನೆ ಎಂದು ಗುಡುಗಿದ್ದಾರೆ.
ಇನ್ನು ಕರ್ನಾಟಕದಲ್ಲಿ ಇತಿಹಾಸದಲ್ಲಿಯೇ ವಿತ್ತೀಯ ಕೊರತೆ ಎದುರಾಗಿರಲಿಲ್ಲ. ಈಗ 20 ಸಾವಿರ ಕೋಟಿ ವಿತ್ತೀಯ ಕೊರತೆ ಎದುರಾಗಿದೆ. ನಾನು ಸಿಎಂ ಆಗಿದ್ದಾಗ ಅಭಿವೃದ್ಧಿಗಾಗಿ ಸಾಲ ಮಾಡಿದ್ದೆ. ಸಂಬಳ ಕೊಡುವುದಕ್ಕಾಗಿ ಸಾಲ ಮಾಡಿರಲಿಲ್ಲ. 5 ವರ್ಷದಲ್ಲಿ 1 ಲಕ್ಷ 25 ಸಾವಿರ ಕೋಟಿ ಸಾಲ ಮಾಡಿದ್ದೆ. ಆದರೆ ಯಡಿಯೂರಪ್ಪನವರು ಒಂದುವರೆ ವರ್ಷದಲ್ಲಿ 2.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇಷ್ಟೊಂದು ಸಾಲ ಏಕೆ ಮಾಡಿದರು? ಸಿಎಂ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.