ಭಾರತದಲ್ಲಿ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ಕೋರಿ ಅಮೆರಿಕದ ಫೈಜರ್ ಕಂಪನಿ ಚೇರ್ಮನ್ ಹಾಗೂ ಸಿಇಓಗೆ ಪುಣೆ ಮೂಲದ ವ್ಯಕ್ತಿಯೊಬ್ಬರು ಇ ಮೇಲ್ ಮಾಡಿದ್ದಾರೆ. ವಿಶೇಷ ಅಂದ್ರೆ ಶ್ರೀಸಾಮಾನ್ಯನ ಇ ಮೇಲ್ಗೆ ಫೈಜರ್ ಕಂಪನಿ ಚೇರ್ಮನ್ ಹಾಗೂ ಸಿಇಓ ಆಲ್ಬರ್ಟ್ ಬೌರ್ಲಾ ಪ್ರತಿಕ್ರಿಯೆ ನೀಡಿದ್ದಾರೆ.
58 ವರ್ಷದ ಪ್ರಕಾಶ್ ಮಿರ್ಪುರಿ ಎಂಬವರು ಮೇ 26ರಂದು ಬೌರ್ಲಾಗೆ ಮಾಡಿದ ಇ ಮೇಲ್ಗೆ ಅಂದೇ ಬೌರ್ಲಾ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕಾಶ್ ಹಾಗೂ ಅವರ ಕುಟುಂಬಸ್ಥರ ಆರೋಗ್ಯ ವಿಚಾರಿಸಿರುವ ಬೌರ್ಲಾ ಭಾರತದಲ್ಲಿ ಫೈಜರ್ ಲಸಿಕೆ ಲಭ್ಯತೆಯ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ ಪ್ರಕಾಶ್ಗೆ ಧನ್ಯವಾದ ಅರ್ಪಿಸಿದ್ರು.
ಅಲ್ಲದೇ ಭಾರತದಲ್ಲಿ ಫೈಜರ್ ಲಸಿಕೆಗೆ ಅನುಮೋದನೆಯನ್ನ ಪಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡ್ತಿರೋದಾಗಿ ಪತ್ರದ ಮೂಲಕ ಉತ್ತರಿಸಿದ್ದಾರೆ. ಭಾರತದಿಂದ ನಮ್ಮ ಲಸಿಕೆಗೆ ಇನ್ನೂ ಅಧಿಕೃತ ಅನುಮೋದನೆ ದೊರಕಿಲ್ಲ. ಭಾರತದಲ್ಲಿ ಫೈಜರ್ ಲಸಿಕೆಯನ್ನ ಪೂರೈಕೆ ಮಾಡುವ ಸಲುವಾಗಿ ಸರ್ಕಾರದೊಂದಿಗೆ ಎಲ್ಲಾ ರೀತಿಯ ಮಾತುಕತೆಯನ್ನ ನಡೆಸುತ್ತಿದ್ದೇವೆ ಎಂದು ಬೌರ್ಲಾ ಬರೆದಿದ್ದಾರೆ.
ಮಾರ್ಚ್ 18ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದ ಪ್ರಕಾಶ್ ಹಾಗೂ ಅವರ ಕುಟುಂಬಸ್ಥರು ಬಳಿಕ ಏಪ್ರಿಲ್ 1ರಂದು ಕೊರೊನಾ ಲಸಿಕೆಗಾಗಿ ನೋಂದಣಿ ಮಾಡಿದ್ದರು. ಕೊರೊನಾ ಸೋಂಕಿಗೆ ಒಳಗಾಗಿದ್ದ ಸಂದರ್ಭದಲ್ಲಿ ಪ್ರಕಾಶ್ ಪ್ರಪಂಚದಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಲಸಿಕೆಗಳು ಹಾಗೂ ಅವುಗಳ ಪರಿಣಾಮಕಾರತ್ವದ ಬಗ್ಗೆ ಅಧ್ಯಯನ ಮಾಡಿದ್ದರು.
ವಿದೇಶಿ ಸ್ನೇಹಿತರ ಜೊತೆಯೂ ಸಂಪರ್ಕ ಹೊಂದಿದ್ದ ಪ್ರಕಾಶ್ ಅಮೆರಿಕದ ಗೆಳೆಯನೊಬ್ಬ ಫೈಜರ್ ಲಸಿಕೆ ಎಲ್ಲಕ್ಕಿಂತ ಉತ್ತಮವಾಗಿದೆ ಎಂದು ಹೇಳಿದ್ದರಂತೆ. ಇದೇ ಕಾರಣಕ್ಕಾಗಿ ಪ್ರಕಾಶ್ ಭಾರತದಲ್ಲಿ ಈ ಲಸಿಕೆ ಯಾವಾಗ ಲಭ್ಯವಾಗುತ್ತೆ ಎಂಬ ಮಾಹಿತಿಯನ್ನ ಪಡೆಯಲು ಇ ಮೇಲ್ ಮಾಡಿದ್ದಾರೆ.