ನವದೆಹಲಿ: ಕೊರೊನಾ ಅಟ್ಟಹಾಸದ ನಡುವೆ ಸಿಬಿಎಸ್ಇ ಹಾಗೂ ಐಸಿಎಸ್ಇ 12ನೇ ತರಗತಿ ಪರೀಕ್ಷೆ ರದ್ದಾಗಲಿದೆಯೇ ಅಥವಾ ಪರೀಕ್ಷೆ ನಡೆಸಬೇಕೆ ಎಂಬ ಬಗ್ಗೆ ಇನ್ನೂ ಗೊಂದಲಗಳು ಮುಂದುವರೆದಿದ್ದು, ಎರಡು ದಿನಗಳಲ್ಲಿ ಸ್ಪಷ್ಟ ಮಾಹಿತಿ ನೀಡುವುದಾಗಿ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು ಪಡಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಇಂದಿಗೆ ಸುಪ್ರೀಂ ಕೋರ್ಟ್ ಮುಂದೂಡಿತ್ತು. ಕೋವಿಡ್ ನಡುವೆ ಪರೀಕ್ಷೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಜೂನ್ 1 ರಂದು ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿರ್ಧಾರ ಪ್ರಕಟಿಸಲಿದ್ದಾರೆ. ಈ ನಿಟ್ಟಿನಲ್ಲಿ ಎರಡು ದಿನಗಳಲ್ಲಿ ಪರೀಕ್ಷೆ ಬಗ್ಗೆ ಮಾಹಿತಿ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕದ ನಡುವೆ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ಸಿಬಿಎಸ್ಇ 12ನೇ ತರಗತಿಯ ಸುಮಾರು 300 ವಿದ್ಯಾರ್ಥಿಗಳು ಕೂಡ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.