ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ 5 ವಿಜ್ಞಾನಿಗಳು ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ರೋಗಿಗೆ ಕೊರೊನಾ ಲಸಿಕೆಯ ಒಂದು ಡೋಸ್ ಸಾಕು ಎಂದವರು ಹೇಳಿದ್ದಾರೆ. ಸದ್ಯ ದೇಶದಲ್ಲಿ ಎರಡು ಡೋಸ್ ಲಸಿಕೆ ಹಾಕಲಾಗ್ತಿದೆ.
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ 10 ದಿನಗಳಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದು ಕೊರೊನಾ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಕೊರೊನಾ ಸೋಂಕಿಗೊಳಗಾಗದ ಜನರಿಗೆ ಪ್ರತಿಕಾಯ ಉತ್ಪತ್ತಿಯಾಗಲು 3-4 ವಾರಗಳು ಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಬಗ್ಗೆ ವಿಜ್ಞಾನಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸೋಂಕಿಗೊಳಗಾದವರಿಗೆ ಒಂದು ಡೋಸ್ ಸೀಮಿತಗೊಳಿಸಿ. ಇದ್ರಿಂದ ಲಸಿಕೆ ಕೊರತೆ ನೀಗಿಸಬಹುದು. ಜೊತೆಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡಬಹುದು ಎಂದು ವಿಜ್ಞಾನಿಗಳು ಪತ್ರದಲ್ಲಿ ಹೇಳಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು 20 ಜನರ ಮೇಲೆ ಪ್ರಾಯೋಗಿಕ ಅಧ್ಯಯನ ಮಾಡಿದ್ದಾರೆ. ನೈಸರ್ಗಿಕ ಪ್ರತಿಕಾಯಗಳ ಪಾತ್ರ ಮತ್ತು ಅದರ ಪ್ರಯೋಜನಗಳ ಕುರಿತು ಸಂಶೋಧನೆ ನಡೆಸಲಾಯಿತು. ಕೊರೊನಾದಿಂದ ಚೇತರಿಸಿಕೊಳ್ಳುವ ಜನರಲ್ಲಿ ಪ್ರತಿಕಾಯಗಳು ವೇಗವಾಗಿ ರೂಪುಗೊಂಡಿವೆ. ಇದು ಕೇವಲ 10 ದಿನಗಳನ್ನು ತೆಗೆದುಕೊಂಡಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಸಾಮಾನ್ಯ ಜನರಲ್ಲಿ ಎರಡೂ ಡೋಸ್ ನಂತ್ರ 21 ರಿಂದ 28 ದಿನಗಳಲ್ಲಿ ಪ್ರತಿಕಾಯ ಉತ್ಪತ್ತಿಯಾಗಿದೆ.