ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀಕರತೆ ನಡುವೆಯೇ ಇದೀಗ ಬ್ಲ್ಯಾಕ್ ಫಂಗಸ್ ಅಟ್ಟಹಾಸ ಹೆಚ್ಚುತ್ತಿದ್ದು, ಮಕ್ಕಳಲ್ಲಿಯೂ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗುತ್ತಿದೆ. ರಾಜ್ಯದಲ್ಲಿ ಇಬ್ಬರು ಮಕ್ಕಳು ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದು, ಇಬ್ಬರಿಗೂ ಮೆದುಳಿಗೆ ಈ ಸೋಂಕು ಅಟ್ಯಾಕ್ ಆಗಿದೆ ಎಂದು ಮಿಂಟೋ ನಿರ್ದೇಶಕಿ ಡಾ.ಸುಜಾತಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕ್ಷಣ ಕ್ಷಣಕ್ಕೂ ತನ್ನ ಕಳಾರತೆಯನ್ನು ತೋರಿಸುತ್ತಿದ್ದು, ಚಿತ್ರದುರ್ಗದ 14 ವರ್ಷದ ಬಾಲಕ ಹಾಗೂ ಬಳ್ಳಾರಿಯ 11 ವರ್ಷದ ಬಾಲಕ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದಾರೆ. ಇಬ್ಬರಿಗೂ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 14 ವರ್ಷದ ಬಾಲಕ ಕಣ್ಣು ಕಳೆದುಕೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಚಿತ್ರದುರ್ಗದ 14 ವರ್ಷದ ಬಾಲಕನಿಗೆ ಕೊರೊನಾ ಸೋಂಕು ಹರಡಿರುವುದೇ ಗೊತ್ತಾಗಿಲ್ಲ ಪರಿಣಾಮ ಅದು ಬ್ಲ್ಯಾಕ್ ಫಂಗಸ್ ಆಗಿ ಮಾರ್ಪಟ್ಟಿದೆ. ಬಾಲಕ ಆಸ್ಪತ್ರೆಗೆ ದಾಖಲಾಗುವ ಮೊದಲೇ ಬ್ಲ್ಯಾಕ್ ಫಂಗಸ್ ಅಟ್ಯಾಕ್ ಆಗಿ ಕಣ್ಣು ಕಳೆದುಕೊಂಡಿದ್ದು, ಮೆದುಳಿಗೆ ಅಟ್ಯಾಕ್ ಆಗಿದೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಬಳ್ಳಾರಿಯ 11 ವರ್ಷದ ಬಾಲಕನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ. ಅಂತಹ ಬಾಲಕನಲ್ಲಿ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದು ಗುಣಮುಖನಾಗುತ್ತಿದ್ದವನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ ಈತನಿಗೂ ಮೆದುಳಿಗೆ ಫಂಗಸ್ ಅಟ್ಯಾಕ್ ಆಗಿದ್ದು, ಅದೃಷ್ಟವಶಾತ್ ಬಾಲಕನ ದೃಷ್ಟಿ ಸರಿಯಿರುವುದರಿಂದ ಅಪಾಯ ಕಡಿಮೆ ಎಂದಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮಕ್ಕಳಲ್ಲಿಯೂ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.