ಬೆಂಗಳೂರು: ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯನ್ನು ತಮಗೆ ನೀಡದಿರುವುದಕ್ಕೆ ಸಚಿವ ಎಂಟಿಬಿ ನಾಗರಾಜ್, ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿಎಂ ಯಡಿಯೂರಪ್ಪ ಮನಸ್ಸಿನಲ್ಲಿ ಏನಿದೆ ಎಂಬುದೇ ಗೊತ್ತಾಗುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿದೆ. ನನಗೆ ಜಿಲ್ಲೆಯ ಉಸ್ತುವಾರಿಯನ್ನು ನೀಡಿದರೆ ಪಕ್ಷ ಸಂಘಟನೆ ಮಾಡುತ್ತೇನೆ ಆದರೆ ಸಿಎಂ ನನಗೆ ಅವಕಾಶವನ್ನೇ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲಸ ಮಾಡುವವರ ಕೈಗಳಿಗೆ ಜವಾಬ್ದಾರಿ ಕೊಡಬೇಕು. ಮನೆಯಲ್ಲಿ ಕುಳಿತವರಿಗೆ ಕೆಲಸ ಕೊಟ್ಟರೆ ಮಾಡುತ್ತಾರ ಎಂದು ಆರ್. ಅಶೋಕ್ ವಿರುದ್ಧವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ನನಗೀಗ ಬೇರೆ ವಿಷಯ ಬೇಡ ಇರುವ ಕೆಲಸ ಮಾಡುತ್ತೇನೆ. ಹೊಸಕೋಟೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಿದೆ ಎಂದರು.
ಇದೇ ವೇಳೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಜೂನ್ 7ರ ಬಳಿಕ ಲಾಕ್ ಡೌನ್ ತೆರವುಗೊಳಿಸುವುದು ಉತ್ತಮ. ಮತ್ತೆ ಲಾಕ್ ಡೌನ್ ಮುಂದುವರೆಸಿದರೆ ಜನರು ಇನ್ನಷ್ಟು ಸಂಕಷ್ಟಕ್ಕೀಡಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.