
ನವದೆಹಲಿ: ಕೊರೊನಾ ವೈರಸ್ ಕಳೆದ ನೂರು ವರ್ಷಗಳಲ್ಲೇ ದೇಶ ಕಂಡ ಅತಿದೊಡ್ಡ ಸಾಂಕ್ರಾಮಿಕ ರೋಗವಾಗಿದ್ದು, ವೈರಸ್ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಈ ಹೋರಾಟದ ಜೊತೆಗೆ ತೌಕ್ತೆ, ಯಾಸ್ ಚಂಡಮಾರುತಗಳನ್ನು ಎದುರಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ʼಮನ್ ಕೀ ಬಾತ್ʼ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ವಿರುದ್ಧ ಪ್ರತಿಯೊಬ್ಬರೂ ಹೋರಾಡುತ್ತಿದ್ದಾರೆ. ವೈದ್ಯರು, ನರ್ಸ್ ಗಳು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ರೋಗಿಗಳು ಆಕ್ಸಿಜನ್ ಇಲ್ಲದೇ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವಿದೇಶಗಳಿಂದಲೂ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಆಕ್ಸಿಜನ್ ರೈಲನ್ನು ಚಲಾಯಿಸಿದ್ದು ದೇಶದ ಹೆಮ್ಮೆ ಎಂದು ಮಹಿಳಾ ಲೋಕೋಪೈಲಟ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಅಕ್ಸಿಜನ್ ಅಭಾವ ಎದುರಾದ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳಿಗೂ ವೇಗವಾಗಿ ಆಕ್ಸಿಜನ್ ಪೂರೈಸಲಾಗಿದೆ. ವಿದೇಶಗಳಿಂದಲೂ ನೌಕಾಪಡೆ, ವಾಯುಪಡೆ, ಡಿಆರ್ಡಿಒ ಸಹಕಾರದಿಂದ ಆಮ್ಲಜನಕ, ಕ್ರಯೋಜನಿಕ್ ಟ್ಯಾಂಕರ್ ಗಳನ್ನು ಭಾರತಕ್ಕೆ ತರಲಾಗಿದೆ. ಎಲ್ಲರ ಶ್ರಮದಿಂದಾಗಿ ಜನರ ಜೀವ ರಕ್ಷಿಸಲಾಗುತ್ತಿದೆ ಎಂದರು.
ಇದೇ ವೇಳೆ ಆಕ್ಸಿಜನ್ ಎಕ್ಸ್ ಪ್ರೆಸ್ ಲೋಕೋಮೊಟಿವ್ ಪೈಲಟ್ ಶಿರಿಷಾ ಹಾಗೂ ಆಕ್ಸಿಜನ್ ಟ್ರಕ್ ಡ್ರೈವರ್ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದರು.