ಬೆಳಗಾವಿ: ಕೊರೊನಾ ಸಾಂಕ್ರಾಮಿಕ ರೋಗ ಹೋಗಲಾಡಿಸಲು ಇತ್ತೀಚೆಗೆ ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ್ ಓಣಿ ಓಣಿಗಳಲ್ಲಿ ಹೋಮ ಮಾಡಿಸಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದರು. ಆದರೆ ಇದೀಗ ಶಾಸಕರನ್ನು ಹೊರತುಪಡಿಸಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೋಮ ಮಾಡಿಸಿದ ನಾಲ್ವರ ವಿರುದ್ಧ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕರ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಶಹಾಪುರದ ಬಸವಣಗಲ್ಲಿಯ ಸುನೀಲ್ ಮುತಗೇಕರ್, ಕಲ್ಲಪ್ಪ ಶಹಾಪುರಕರ್, ಜಯಂತ ಜಾಧವ್, ಗಿರೀಶ್ ದೋಂಗಡಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮೇ 24ರಂದು ಬಸವಣಗಲ್ಲಿಯಲ್ಲಿ ಹೋಮ ಮಾಡಿಸಿದ್ದರು. ಆದರೆ ಶಾಸಕ ಅಭಯ ಪಾಟೀಲ್ ಕೂಡ ಜಿಲ್ಲೆಯಲ್ಲಿ 50 ಕಡೆಗಳಲ್ಲಿ ಕೋವಿಡ್ ನಿವಾರಣೆಗಾಗಿ ಹಾಗೂ ವಾತಾವರಣ ಶುದ್ಧಿಗಾಗಿ ಹೋಮ ಮಾಡಿಸಿದ್ದರು. ಇದೀಗ ಶಾಸಕರನ್ನು ಬಿಟ್ಟು ಬೇರೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.