ಅರೇಂಜ್ ಮದುವೆಗೆ ಒಲ್ಲೆ ಎಂದು ಪಾಕಿಸ್ತಾನ ಮೂಲದ 18 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ.
ಸಮನ್ ಅಬ್ಬಾಸ್ ಹೆಸರಿನ ಈ ಟೀನೇಜರ್ ಸಂಪ್ರದಾಯದ ಪ್ರಕಾರ ತನ್ನ ಕುಟುಂಬ ಆಯೋಜಿಸಲು ಮುಂದಾಗಿದ್ದ ಮದುವೆ ಆಗಲಾರೆ ಎಂದಿದ್ದಾಳೆ. ಆಕೆಯನ್ನು ಸಹೋದರ ಸಂಬಂಧಿಗೆ ಕೊಟ್ಟು ಮದುವೆ ಮಾಡಲು ಆಕೆಯ ಕುಟುಂಬ ಸಿದ್ಧತೆ ಮಾಡಿಕೊಂಡಿತ್ತು.
ಇದೇ ವಿಚಾರವಾಗಿ ತನ್ನ ಹೆತ್ತವರ ವಿರುದ್ಧ ಕಳೆದ ವರ್ಷವೇ ಪೊಲೀಸರಿಗೆ ಎರಡು ಬಾರಿ ದೂರು ಕೊಟ್ಟಿದ್ದ ಈಕೆ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಆಶ್ರಯತಾಣವೊಂದಕ್ಕೆ ಸೇರಿದ್ದಳು. ಮಗಳ ಈ ನಡೆಯಿಂದ ಕುಟುಂಬಸ್ಥರು ಸಿಟ್ಟಿಗೆದ್ದಿದ್ದರು.
ಮೇ 5ರಂದು ಪೊಲೀಸರು ಸಮನ್‌ಳ ಹೆತ್ತವರ ಮನೆಗೆ ಭೇಟಿ ಕೊಟ್ಟ ವೇಳೆ ಅಲ್ಲಿ ಯಾರೂ ಇರಲಿಲ್ಲ. ಏನಾಗಿದೆ ಎಂದು ತನಿಖೆ ನಡೆಸಿದ ಬಳಿಕ ಸಮನ್‌ಳನ್ನು ಬಿಟ್ಟು ಆಕೆಯ ಕುಟುಂಬಸ್ಥರು ಪಾಕಿಸ್ತಾನಕ್ಕೆ ತೆರಳಿದ್ದಾರೆ ಎಂದು ತಿಳಿಯಿತು.
ಭದ್ರತಾ ಕ್ಯಾಮೆರಾಗಳ ನೆರವಿನಿಂದ ಪೊಲೀಸರು ಪರಿಶೀಲಿಸಿದಾಗ ಸಮನ್ ಮನೆಯಲ್ಲಿ ಐವರು ಗುದ್ದಲಿಗಳು, ಚೂಪಾದ ಉಪಕರಣ ಹಾಗೂ ಬಕೆಟ್ ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಸ್ಥಳೀಯ ಪೊಲೀಸರು, ಈ ಅಪರಾಧದಲ್ಲಿ ಭಾಗಿಯಾಗಿರುವ ಬಲವಾದ ಸಂಶಯದಲ್ಲಿ ಹುಡುಗಿಯ ಹೆತ್ತವರು ಹಾಗೂ ಆಕೆಯ ಚಿಕ್ಕಪ್ಪ ಮತ್ತಿಬ್ಬರು ಸಹೋದರ ಸಂಬಂಧಿಗಳು ಸೇರಿ ಒಟ್ಟು ಐವರ ಹುಡುಕಾಟದಲ್ಲಿದ್ದಾರೆ.