ರಾಜಕೀಯ ಕೆಸರೆರಚಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡವಿನ ವಾಕ್ಸಮರ ಬೇರೆಯದ್ದೇ ಲೆವೆಲ್ನಲ್ಲಿದೆ.
ಯಾಸ್ ಚಂಡಮಾರುತ ಸಂಬಂಧ ಪ್ರಧಾನಿ ಕರೆದಿದ್ದ ತುರ್ತು ಸಭೆಯನ್ನು ಮಿಸ್ ಮಾಡಿಕೊಂಡ ಆಪಾದನೆ ಎದುರಿಸುತ್ತಿರುವ ದೀದಿ, ಇದಕ್ಕೆ ಪ್ರತಿಕ್ರಿಯಿಸಿದ್ದು, “ಒಂದು ವೇಳೆ ರಾಜ್ಯದ ಜನರ ಕಲ್ಯಾಣಕ್ಕಾಗಿ ತಮ್ಮ ಪಾದಸ್ಪರ್ಶ ಮಾಡು ಎಂದರೆ ನಾನು ಮಾಡಲು ಸಿದ್ಧ. ಆದರೆ, ಅವರು ಮಾಡುವ ಅವಮಾನ ಸಹಿಸಿಕೊಳ್ಳಲಾರೆ” ಎಂದಿದ್ದಾರೆ.
“ಪ್ರಧಾನ ಮಂತ್ರಿ ಕಾರ್ಯಾಲಯ ನನಗೆ ಅವಮಾನ ಮಾಡಿ, ನನ್ನ ವರ್ಚಸ್ಸಿಗೆ ಧಕ್ಕೆಯಾವು ರೀತಿಯಲ್ಲಿ ಟ್ವೀಟ್ಗಳನ್ನು ಪೋಸ್ಟ್ ಮಾಡಿದೆ. ಚಂಡಮಾರುತ ಸಂಬಂಧ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ನಡುವೆ ನಡೆಯಬೇಕಿದ್ದ ಸಭೆಗೆ ಬಿಜೆಪಿ ನಾಯಕರು ಹಾಗೂ ರಾಜ್ಯಪಾಲರನ್ನು ಕರೆದಿದ್ದು ಏಕೆ? ನನಗೆ ಅವಮಾನವಾದಂತೆ ಆಗಿದೆ” ಎಂದು ದೀದಿ ಹೇಳಿದ್ದಾರೆ.
ಯಾಸ್ ಚಂಡಮಾರುತ ಮಾಡಿರುವ ಹಾನಿಯನ್ನು ಪರಿಶೀಲನೆ ಮಾಡಲು ಒಡಿಶಾಗೆ ತೆರಳಿದ್ದ ಪ್ರಧಾನಿ ಮೋದಿ, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ತೆರಳಿದ ವೇಳೆ ಇಬ್ಬರ ನಡುವೆ ಹೊಸದಾಗಿ ಶೀತಲ ಸಮರ ಆರಂಭಗೊಂಡಿತ್ತು.
ಈ ವೇಳೆ ನಡೆದ ಸಭೆಯಲ್ಲಿ ರಾಜ್ಯ ರಾಜಕೀಯ ನಾಯಕರೊಂದಿಗೆ, ರಾಜ್ಯಪಾಲ ಜಗದೀಪ್ ಧನಕರ್ ಹಾಗೂ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರದಾನ್ ಹಾಗೂ ದೇಬಶ್ರೀ ಚೌಧರಿ ಪ್ರವಾಹದಿಂದ ಆದ ಹಾನಿಯ ಕುರಿತಂತೆ ಭಾಗವಹಿಸಬೇಕಿತ್ತು. ಆದರೆ, ಇವರನ್ನು ಅರ್ಧ ಗಂಟೆ ಕಾಯಿಸಿದ ಬ್ಯಾನರ್ಜಿ, ಕೆಲವೇ ನಿಮಿಷಗಳ ಮಟ್ಟಿಗೆ ಮೀಟಿಂಗ್ಗೆ ಆಗಮಿಸಿ ಚಂಡಮಾರುತದಿಂದ ಆದ ಹಾನಿಯ ಕುರಿತ ವರದಿಯಿದ್ದ ಪುಟಗಳನ್ನು ಪ್ರಧಾನಿಗೆ ಕೊಟ್ಟು ಹೋಗಿದ್ದು, ಈ ವಿಚಾರವಾಗಿ ಬಿಜೆಪಿ ನಾಯಕರು ದೀದಿ ಮೇಲೆ ಆರೋಪಗಳನ್ನು ಮಾಡಿದ್ದಾರೆ ಎನ್ನಲಾಗಿದೆ.