ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ ಮತ್ತೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಒಂದು ಲೀಟರ್ಗೆ 26 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಒಂದು ಲೀಟರಿಗೆ 28 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ದರ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್ಗೆ 93.94 ರೂಪಾಯಿ ಮತ್ತು ಡೀಸೆಲ್ 84.89 ರೂ. ಇದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಒಂದು ಲೀಟರ್ ಪೆಟ್ರೋಲ್ ಗೆ 100.19 ರೂ., ಡೀಸೆಲ್ ಒಂದು ಲೀಟರ್ ಗೆ 92.17 ರೂಪಾಯಿ ಇದೆ. ಕೊಲ್ಕತ್ತಾದಲ್ಲಿ ಒಂದು ಲೀಟರ್ ಪೆಟ್ರೋಲ್ ದರ 93.97 ರೂ., ಡೀಸೆಲ್ ದರ 87.74 ರೂ. ಇದೆ.
ಮೇ ತಿಂಗಳಲ್ಲಿ 16 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಆದರೆ ಒಂದೇ ಒಂದು ಸಲ ದರ ಕಡಿತ ಮಾಡಿಲ್ಲ. ಇದರ ಪರಿಣಾಮ ದೇಶದ ಅನೇಕ ನಗರಗಳಲ್ಲಿ ದಾಖಲೆಯ ಗರಿಷ್ಠಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವಾಗುತ್ತಿದೆ. ಮೇ 4 ರಿಂದ ಇದುವರೆಗೆ ಒಂದು ಲೀಟರ್ ಪೆಟ್ರೋಲ್ ಬೆಲೆ 3.59 ರೂ. ಮತ್ತು ಡೀಸೆಲ್ ಬೆಲೆ 4.13 ರೂ. ಹೆಚ್ಚಳವಾಗಿದೆ.