ಜೈಪುರ್: ರಾಜಸ್ಥಾನದ ಚಿತ್ತೋರಗಢ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಪ್ರಕರಣವೊಂದರಲ್ಲಿ ಮೂವರು ಸಹೋದರಿಯರ ಮೇಲೆ ತಾಯಿಯ ಪ್ರಿಯಕರ ಹಲವಾರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.
14 ವರ್ಷ, 12 ವರ್ಷ ಮತ್ತು 10 ವರ್ಷದ ಅಪ್ರಾಪ್ತ ಸಹೋದರಿಯರಿಗೆ ಅವರ ತಾಯಿಯ ಪ್ರಿಯಕರ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಮೂವರು ಅಪ್ರಾಪ್ತ ಸಹೋದರಿಯರು ತಮ್ಮ ತಾಯಿಗೆ ಆಕೆಯ ಪ್ರಿಯಕರನ ಕೃತ್ಯದ ಬಗ್ಗೆ ತಿಳಿಸಿದ್ದಾರೆ. ಮಹಿಳೆ ತನ್ನ ಪ್ರಿಯಕರನನ್ನು ಪ್ರಶ್ನಿಸಿದಾಗ, ಆತ ತನ್ನ ನಡವಳಿಕೆ ಬದಲಿಸಿಕೊಳ್ಳುವ ಬದಲಿಗೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಮುಂದುವರಿಸಿದ್ದಾನೆ.
ನಂತರ ಮಹಿಳೆ ಸಹಾಯಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿಯ ಮೊರೆ ಹೋಗಿದ್ದಾಳೆ. ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರದ ನೆರವಿನ ಆಶ್ರಯ ತಾಣಕ್ಕೆ ಹೆಣ್ಣುಮಕ್ಕಳನ್ನು ಕಳುಹಿಸಿದ್ದಾಳೆ.
ಕಳೆದ ನಾಲ್ಕು ತಿಂಗಳಿನಿಂದ ಮೂವರು ಅಪ್ರಾಪ್ತ ಸಹೋದರಿಯರು ಕೇರ್ ಹೋಂನಲ್ಲಿ ವಾಸವಾಗಿದ್ದು, ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ಯಾವಾಗಲೂ ಅಂಜಿಕೆ ಪಡುತ್ತಿದ್ದರು. ಇತ್ತೀಚೆಗೆ ಹಿರಿಯ ಸಹೋದರಿ ಆಪ್ತ ಸಮಾಲೋಚನೆ ಸಂದರ್ಭದಲ್ಲಿ ತನ್ನ ತಾಯಿಯ ಲಿವ್ ಇನ್ ಪಾಲುದಾರ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮತ್ತು ತನ್ನ ಸಹೋದರಿಯರ ಮೇಲೆ ಅನೇಕ ಸಲ ಅತ್ಯಾಚಾರ ಎಸಗಿರುವ ಬಗ್ಗೆ ತಿಳಿಸಿದ್ದಾಳೆ.
ಆಪ್ತಸಮಾಲೋಚನೆ ನಂತರದಲ್ಲಿ ಅಧಿಕಾರಿಗಳು ಚಿತ್ತೋರ್ ಗಢದ ಸಿಡಬ್ಲ್ಯುಸಿ ಅಧ್ಯಕ್ಷ ರಮೇಶ್ ಚಂದ್ರ ದಶೋರಾ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರದಲ್ಲಿ ಸಿಡಬ್ಲ್ಯುಸಿ ತಂಡ ಬಾಲಕಿಯರನ್ನು ಆಶ್ರಯ ತಾಣದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದೆ.
ಸಿಡಬ್ಲ್ಯುಸಿ ಮಹಿಳಾ ಸದಸ್ಯರೊಬ್ಬರು ಸಮಾಲೋಚನೆ ನಡೆಸಿದಾಗ, ಹಿರಿಯ ಸಹೋದರಿ ನಡೆದ ವಿಷಯಗಳ ಬಗ್ಗೆ ತಿಳಿಸಿದ್ದಾಳೆ. ತಮ್ಮ ತಂದೆ ಬಿಲ್ವಾರದಲ್ಲಿ ವಾಸವಾಗಿದ್ದಾರೆ. ಆತ ಮದ್ಯಪಾನ ಮಾಡುತ್ತಿದ್ದ. 10 ವರ್ಷಗಳ ಹಿಂದೆ ತಂದೆಯನ್ನು ತೊರೆದ ತಾಯಿ ಚಿತ್ತೋರಗಢ ಕುಂಬಾ ನಗರದಲ್ಲಿ ಆರೋಪಿಯೊಂದಿಗೆ ವಾಸವಾಗಿದ್ದಳು.
ಹಿರಿಯ ಪುತ್ರಿ ಮತ್ತು ಎರಡನೇ ಮಗಳು ತಂದೆಯೊಂದಿಗೆ ಇದ್ದರು. ಕಿರಿಯ ಮಗಳು ತಾಯಿಯೊಂದಿಗೆ ವಾಸವಾಗಿದ್ದಳು. ಕುಡುಕ ತಂದೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು 60 ಸಾವಿರ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದು, ಈ ವಿಷಯ ತಿಳಿದ ಮೊದಲ ಮತ್ತು ಎರಡನೇ ಪುತ್ರಿ ತಾಯಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತಾಯಿ ಅವರಿಬ್ಬರನ್ನು ಕೂಡ ತನ್ನೊಂದಿಗೆ ಚಿತ್ತೋರಗಢಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಳೆದ ಮೂರು ವರ್ಷದಲ್ಲಿ ಮೂವರು ಅಪ್ರಾಫ್ತ ಮಕ್ಕಳ ಮೇಲೆ ಆಕೆಯ ತಾಯಿಯ ಪ್ರಿಯಕರ ಅತ್ಯಾಚಾರ ಎಸಗಿರುವುದಾಗಿ ಹಿರಿಯ ಪುತ್ರಿ ಎಲ್ಲ ಘಟನೆಯನ್ನು ಸವಿವರವಾಗಿ ತಿಳಿಸಿದ್ದಾಳೆ.
ಬಳಿಕ CWC ಅಧಿಕಾರಿಗಳು ಹಿರಿಯ ಬಾಲಕಿಯಿಂದ ದೂರು ಕೊಡಿಸಿದ್ದಾರೆ. ಸದರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಕೊಳ್ಳಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.