ಬೆಂಗಳೂರು: ಪ್ರಾಥಮಿಕ ಶಾಲೆ ಶಿಕ್ಷಕರು ಪ್ರೌಢಶಾಲೆ ಸಹ ಶಿಕ್ಷಕ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ(KAT) ಆದೇಶಿಸಿದೆ.
1 -5 ನೇ ತರಗತಿಗೆ ಪಾಠ ಮಾಡುವ ಪ್ರಾಥಮಿಕ ಶಾಲೆ ಶಿಕ್ಷಕರು, ಪ್ರೌಢಶಾಲೆ ಸಹ ಶಿಕ್ಷಕ ಗ್ರೇಡ್- 2 ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಲ್ಲ ಎಂದು ಆದೇಶಿಸಲಾಗಿದೆ. ಪ್ರಾಥಮಿಕ ಶಾಲೆ ಶಿಕ್ಷಕರುಗಳಿಗೆ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ನೀಡಿದ್ದಲ್ಲಿ ಅದನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಇದರಿಂದ ಈಗಾಗಲೇ ಬಡ್ತಿ ಪಡೆದುಕೊಂಡ ಸುಮಾರು 8000 ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಹಿಂಬಡ್ತಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಎಟಿ ಹಂಗಾಮಿ ಅಧ್ಯಕ್ಷ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ ನೇತೃತ್ವದ ಪೀಠ ಈ ಬಗ್ಗೆ ಆದೇಶ ಹೊರಡಿಸಿದೆ. ಪ್ರಾಥಮಿಕ ಶಾಲೆ ಶಿಕ್ಷಕರು ಪ್ರೌಢಶಾಲೆ ಸಹಶಿಕ್ಷಕ ಗ್ರೇಡ್-2 ಪಡೆಯಲು ಅರ್ಹರಲ್ಲ. ಅವರ ಬದಲಿಗೆ 6 -8 ನೇ ತರಗತಿ ಪಾಠ ಮಾಡುವ ಹಿರಿಯ ಪ್ರಾಥಮಿಕ ಶಿಕ್ಷಕರು ಮಾತ್ರ ಅರ್ಹರು ಎಂದು ಆದೇಶ ಹೊರಡಿಸಲಾಗಿದೆ.
1.30 ಲಕ್ಷ ಪ್ರಾಥಮಿಕ ಶಿಕ್ಷಕರು ತಮ್ಮನ್ನು ಪ್ರೌಢಶಾಲೆ ಸಹಶಿಕ್ಷಕ ಗ್ರೇಡ್-2 ಹುದ್ದೆಗೆ ಪರಿಗಣಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ತಂದು ಸುಮಾರು 8 ಸಾವಿರ ಶಿಕ್ಷಕರು ಈಗಾಗಲೇ ಪದೋನ್ನತಿ ಪಡೆದುಕೊಂಡಿದ್ದಾರೆ. ಅವರಿಗೆ ಹಿಂಬಡ್ತಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.