ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಬದಲಾವಣೆ ಪ್ರಶ್ನೆಯೇ ಇಲ್ಲ. ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೆ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಮುಂದಿನ ಚುನಾವಣೆಯನ್ನೂ ಅವರ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಯಾವತ್ತೂ ಯಡಿಯೂರಪ್ಪನವರ ಪರ ನಿಲ್ಲುತ್ತೇನೆ. 40 ವರ್ಷಗಳಿಂದ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ಕಷ್ಟದ ಕಾಲದಲ್ಲೂ ಅವರ ಜೊತೆಗಿದ್ದೆ. ಈಗಲೂ ಅವರ ಜೊತೆಗಿದ್ದೇನೆ ಎಂದರು.
ಮೂರು ತಿಂಗಳಿಗೊಮ್ಮೆ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬರುತ್ತಿದೆ. ಕೆಲವರಿಗೆ ಪದೇ ಪದೇ ಸಿಎಂ ಬದಲಾಗುತ್ತಾರೆ ಎಂದು ಹೇಳದಿದ್ದರೆ ತಿಂದಿದ್ದು ಜೀರ್ಣವಾಗಲ್ಲ. ಇಂತಹ ಹೇಳಿಕೆ ನೀಡುವುದೇ ಅವರಿಗೆ ಚಟವಾಗಿದೆ ಎಂದು ಕಿಡಿಕಾರಿದರು.
ಸಿಎಂ ಯಡಿಯೂರಪ್ಪನವರು ಪೂರ್ಣಾವಧಿ ಮುಗಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ, ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಯನ್ನು ಎದುರಿಸಿ ಗೆಲ್ಲುತ್ತೇವೆ ಎಂದು ಹೇಳಿದರು.