ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಅಂತಹ ಯಾವುದೇ ಗೊಂದಲದ ಹೇಳಿಕೆಗಳ ಅಗತ್ಯವಿಲ್ಲ. ನಮ್ಮ ಸರ್ವಸಮ್ಮತ ನಾಯಕ ಬಿ.ಎಸ್.ಯಡಿಯೂರಪ್ಪ, ಈ ಬಗ್ಗೆ ಕೇಂದ್ರದ ನಾಯಕರು, ಹೈಕಮಾಂಡ್ ಕೂಡ ಸ್ಪಷ್ಟವಾಗಿ ತಿಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಶಾಸಕಾಂಗ ಪಕ್ಷದ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕೋವಿಡ್ ಸಮಸ್ಯೆ ಮುಗಿಯುವವರೆಗೂ ಯಾವುದೇ ಸಭೆ ಇಲ್ಲ. ಪ್ರತಿಯೊಬ್ಬ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿಂತು ಕೋವಿಡ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಹೊರತು ಬೇರಾವುದೇ ವಿಚಾರದ ಬಗ್ಗೆ ಮಾತನಾಡುವಂತಿಲ್ಲ ಈ ಬಗ್ಗೆ ಶಾಸಕರಿಗೆ ಮತ್ತೊಮ್ಮೆ ಸೂಚಿಸುತ್ತಿದ್ದೇನೆ ಎಂದರು.
ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆ ವಿಚಾರವಾಗಿ ಇಂದು ಅವರಿಂದ ವಿವರಣೆ ಪಡೆಯುತ್ತೇನೆ. ಇನ್ನು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಸಿಎಂ ಆದಾಗಿನಿಂದ ರಾಜ್ಯದಲ್ಲಿ ಬದಲಾವಣೆ ಮಾತು ಕೇಳಿಬರುತ್ತಲೇ ಇದೆ. ಇಂತಹ ಅನಗತ್ಯ ಹೇಳಿಕೆಗಳು ಬೇಡ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಈ ಬಗ್ಗೆ ಚರ್ಚೆಗೂ ಆಸ್ಪದವಿಲ್ಲ. ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಮಾತ್ರ ಶಾಸಕರು ಗಮನಕೊಡಬೇಕು ಹೊರತು ಯಾವುದೇ ಗೊಂದಲದ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಮರ್ಪಕವಾಗಿ ಕೋವಿಡ್ ನಿಯಂತ್ರಣ ಮಾಡಲಾಗುತ್ತಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಿಎಂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.