ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತ್ರಿವರ್ಣ ಧ್ವಜಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಹ್ಲಾದ್ ಪಟೇಲ್ ಗುರುವಾರ ಕೇಜ್ರಿವಾಲ್ ಹಾಗೂ ಉಪರಾಜ್ಯಪಾಲ ಅನಿಲ್ ಬೈಜಲ್ಗೆ ಪತ್ರವೊಂದನ್ನ ಬರೆದಿದ್ದಾರೆ.
ಈ ಪತ್ರದಲ್ಲಿ ಪ್ರಹ್ಲಾದ್ ಪಟೇಲ್, ಅರವಿಂದ್ ಕೇಜ್ರಿವಾಲ್ ಭಾಷಣಗಳನ್ನ ಮಾಡುವಾಗ ಅವರ ಹಿಂಬದಿಯಲ್ಲಿ ಕಾಣಿಸುವ ತ್ರಿವರ್ಣ ಧ್ವಜದಲ್ಲಿ ಬಿಳಿ ಬಣ್ಣವನ್ನ ಕಡಿಮೆ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೆಹಲಿ ಉಪರಾಜ್ಯಪಾಲರಿಗೆ ಬರೆಯಲಾದ ಪತ್ರದಲ್ಲಿ ಪ್ರಹ್ಲಾದ್ ಪಟೇಲ್ : ದೆಹಲಿ ಸಿಎಂ ಅವರಿಂದ್ ಕೇಜ್ರಿವಾಲ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವಾಗೆಲ್ಲ ನನ್ನ ಗಮನ ಅವರ ಕುರ್ಚಿಯ ಹಿಂಬದಿಯಲ್ಲಿರುವ 2 ತ್ರಿವರ್ಣ ಧ್ವಜದ ಕಡೆಗೆ ಹೋಗುತ್ತಿತ್ತು. ಇಲ್ಲಿ ತ್ರಿವರ್ಣ ಧ್ವಜವನ್ನ ಅಲಂಕಾರಿಕ ವಸ್ತುವನ್ನಾಗಿ ಬಳಸಿಕೊಂಡಿರೋದು ಸಂವಿಧಾನಕ್ಕೆ ವಿರೋಧವಾಗಿದೆ. ಅಲ್ಲದೇ ಈ ತ್ರಿವರ್ಣ ಧ್ವಜದಲ್ಲಿ ಬಿಳಿ ಭಾಗವನ್ನ ಕಡಿಮೆ ಮಾಡಿ ಹಸಿರು ಭಾಗವನ್ನ ಹೆಚ್ಚು ಮಾಡಲಾಗಿದೆ. ಈ ರೀತಿ ದೇಶದ ಧ್ವಜದ ಆಕಾರದಲ್ಲಿ ಬದಲಾವಣೆ ಮಾಡಿದ್ದು ರಾಷ್ಟ್ರಧ್ವಜದ ವಿಚಾರದಲ್ಲಿ ಗೃಹ ಸಚಿವಾಲಯ ರೂಪಿಸಿರುವ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಬರೆದಿದ್ದಾರೆ.
ಮಕ್ಕಳಿಗಾಗಿ ಫೈಜರ್ ಲಸಿಕೆಯನ್ನ ಖರೀದಿ ಮಾಡಬೇಕು ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ದಿನವೇ ಈ ಪತ್ರವನ್ನ ಪ್ರಹ್ಲಾದ್ ಪಟೇಲ್ ಕಳುಹಿಸಿದ್ದಾರೆ.