ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಮಾಡಲು ದೆಹಲಿವರೆಗೂ ಹೋಗಿ ಪ್ರಯತ್ನ ನಡೆಸಿದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಗಿಬಿದ್ದಿದ್ದಾರೆ.
ಪಕ್ಷ ದ್ರೋಹ ಆರೋಪದ ಮೇಲೆ ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಪಕ್ಷದಿಂದಲೂ ಉಚ್ಛಾಟಿಸಬೇಕು ಎಂದು ಯೋಗೇಶ್ವರ್ ಮೇಲೆ ಮುಗಿಬಿದ್ದ ಮುಖ್ಯಮಂತ್ರಿ ನಿಷ್ಠರು ಒತ್ತಡ ಹೇರಿದ್ದಾರೆ.
ಯಡಿಯೂರಪ್ಪ ನಿಷ್ಠರಾದ ರೇಣುಕಾಚಾರ್ಯ, ರಾಜುಗೌಡ, ಆಯನೂರು ಮಂಜುನಾಥ್, ಅಪ್ಪಚ್ಚುರಂಜನ್ ಸೇರಿದಂತೆ ಹಲವು ನಾಯಕರು ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದ್ದು, ಪಕ್ಷದಿಂದ ಯೋಗೇಶ್ವರ್ ಅವರನ್ನು ವಜಾ ಮಾಡಬೇಕು, ಸಂಪುಟದಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಯೋಗೇಶ್ವರ್ ನನ್ನು ಸಚಿವನನ್ನಾಗಿ ಮಾಡಿದ್ದೆ ದೊಡ್ಡ ತಪ್ಪು. ಮೆಗಾಸಿಟಿ ಹಗರಣದಲ್ಲಿ ಯೋಗೀಶ್ವರನನ್ನು ಬಂಧಿಸಬೇಕು. ಬ್ಲಾಕ್ ಮೇಲ್ ಮಾಡುವವರಿಗೆ ಬುದ್ಧಿ ಕಲಿಸಬೇಕು ಎಂದು ರೇಣುಕಾಚಾರ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಸಚಿವರಾದ ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಬೈರತಿ ಬಸವರಾಜ್, ಕೋಟ ಶ್ರೀನಿವಾಸ ಪೂಜಾರಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಸಿಎಂ ಪರ ಮಾತನಾಡಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಾರೆ.
ಪಕ್ಷದ ಕೆಲವು ಶಾಸಕರು, ಸಚಿವರು ತಮ್ಮ ವಿರುದ್ಧ ಮಾತನಾಡುತ್ತಿದ್ದಂತೆ ಯೋಗೇಶ್ವರ್ ಕಿಡಿಕಾರಿದ್ದು, ಹೀಗೆ ಮಾತನಾಡುವವರಿಗೆ ಯಾರ ಕುಮ್ಮಕ್ಕು ಇದೆ ಎಂಬುದು ಗೊತ್ತಿದೆ ಎಂದು ತಿಳಿಸಿದ್ದಾರೆ.