ಬೆಂಗಳೂರಿನಲ್ಲಿ ಯುವತಿ ಖಾಸಗಿ ಭಾಗಕ್ಕೆ ಒದ್ದು ಮತ್ತು ಸಾಮೂಹಿಕ ಅತ್ಯಾಚಾರ ಎಸಗಿದ್ದ ವಿಡಿಯೋ ದೇಶಾದ್ಯಂತ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಐವರನ್ನು ಬಂಧಿಸಿದ್ದಾರೆ.
ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಘಟನೆಯ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಅಸ್ಸಾಂ ಪೊಲೀಸರ ಗಮನವನ್ನೂ ಸೆಳೆದಿತ್ತು. ಬೆಂಗಳೂರು ರಾಮಮೂರ್ತಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಂಗ್ಲಾ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದವರನ್ನು ಬಂಧಿಸಿದ್ದಾರೆ.
ಬಾಂಗ್ಲಾದ ಸಾಗರ್, ರಿದಾಯ ಬಾಬು, ಮೊಹಮ್ಮದ್ ಬಾಬು ಶೇಕ್, ಹೈದರಾಬಾದ್ ಹಕಿಲ್ ಹಾಗೂ ಬಾಂಗ್ಲಾದ ಓರ್ವ ಯುವತಿಯನ್ನು ಬಂಧಿಸಲಾಗಿದೆ. ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ. ಲೇಔಟ್ ನಲ್ಲಿ 10 ದಿನಗಳ ಹಿಂದೆ ಕೃತ್ಯವೆಸಗಿದ್ದಾರೆ.
ಯುವತಿಗೆ ಹಿಂಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಬಾಂಗ್ಲಾ ಮೂಲದ ಆರೋಪಿಗಳು ಆಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳು ಸ್ನೇಹಿತೆಯಾಗಿರುವ ಸಂತ್ರಸ್ಥೆಯ ಮೇಲಿನ ದ್ವೇಷದಿಂದ ಇಂತಹ ಕೃತ್ಯವೆಸಗಿದ್ದಾರೆ. ಈ ವಿಡಿಯೋ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳು ಮತ್ತು ಬಾಂಗ್ಲಾದೇಶದಲ್ಲಿ ವೈರಲ್ ಆಗಿತ್ತು.
ಅಸ್ಸಾಂ ಪೊಲೀಸರು ವಿಡಿಯೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಸಹಾಯ ಕೇಳಿದ್ದು, ಸೂಕ್ತ ಬಹುಮಾನವನ್ನು ಕೂಡ ಘೋಷಿಸಿದ್ದರು. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಇದರ ಬಗ್ಗೆ ಪ್ರಸ್ತಾಪಿಸಿದ್ದರು. ನಂತರದಲ್ಲಿ ಬಾಂಗ್ಲಾ ಪೊಲೀಸರು ವಿಡಿಯೋ ಗಮನಿಸಿ ಸಂತ್ರಸ್ಥೆ ಕುಟುಂಬದ ಸದಸ್ಯರನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಮಮೂರ್ತಿನಗರ ಪೊಲೀಸರ ಗಮನಕ್ಕೆ ವಿಷಯ ಬಂದ ಕೂಡಲೇ ಆವಲಹಳ್ಳಿಯಲ್ಲಿ ಅಡಗಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.