ಸದ್ಯ ದೇಶದಲ್ಲಿ ಹೊಸ ಐಟಿ ನಿಯಮ ಚರ್ಚೆಯಲ್ಲಿದ್ದು, ಈ ಹೊಸ ನಿಯಮದ ಪ್ರಕಾರ ಸೋಶಿಯಲ್ ಮೀಡಿಯಾ ವೇದಿಕೆಗಳು ಬ್ಯಾನ್ ಆಗಲಿದ್ಯಾ ಎಂಬ ಪ್ರಶ್ನೆ ಅನೇಕರನ್ನ ಕಾಡುತ್ತಿದೆ. ಈ ಗೊಂದಲದ ನಡುವೆಯೇ ವಾಟ್ಸಾಪ್ ಕಾಲ್ ಕುರಿತಾದ ತಪ್ಪು ಮಾಹಿತಿಯೊಂದು ಸೋಶಿಯಲ್ ಮೀಡಿಯಾದಲ್ಲಿ ರೌಂಡ್ ಹಾಕುತ್ತಿದೆ.
ಕೇಂದ್ರ ಸರ್ಕಾರವು ಎಲ್ಲಾ ವಾಟ್ಸಾಪ್ ಕರೆಗಳನ್ನ ರೆಕಾರ್ಡ್ ಮಾಡುತ್ತಿದೆ. ಹಾಗೂ ನಿಮ್ಮ ವಾಟ್ಸಾಪ್ ಸಂದೇಶದಲ್ಲಿ ಎರಡು ನೀಲಿ ಟಿಕ್ ಹಾಗೂ ಒಂದು ಕೆಂಪು ಬಣ್ಣದ ಟಿಕ್ ಕಂಡು ಬಂದಲ್ಲಿ ನಿಮ್ಮ ಎಲ್ಲಾ ಮಾಹಿತಿಗಳನ್ನ ಸರ್ಕಾರ ಪಡೆದಿದೆ ಎಂದರ್ಥ. ಒಂದು ವೇಳೆ ನಿಮ್ಮ ಸಂದೇಶಕ್ಕೆ ಮೂರು ಕೆಂಪು ಬಣ್ಣದ ಟಿಕ್ ಕಂಡು ಬಂದಿದೆ ಎಂದರೆ ಸರ್ಕಾರ ವಿಚಾರಣೆ ಆರಂಭಿಸಿದೆ ಎಂದರ್ಥ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಆದರೆ ಇದೊಂದು ಸಂಪೂರ್ಣ ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಕೇಂದ್ರ ಸರ್ಕಾರವು ಇಂತಹ ಯಾವುದೇ ನಿಯಮಾವಳಿಗಳನ್ನ ಜಾರಿಗೆ ತಂದಿಲ್ಲ. ವಾಟ್ಸಾಪ್ ಕರೆಗಳನ್ನ ರೆಕಾರ್ಡ್ ಮಾಡುವ ಹಾಗೂ ಈ ಮೂರು ಟಿಕ್ ವ್ಯವಸ್ಥೆ ಇದ್ಯಾವುದನ್ನೂ ಐಟಿ ಸಚಿವಾಲಯ ಜಾರಿಗೆ ತಂದಿಲ್ಲ.
ವಾಟ್ಸಾಪ್ನಲ್ಲಿ ನೀವು ಕಳುಹಿಸಿದ ಸಂದೇಶಕ್ಕೆ ಎರಡು ನೀಲಿ ಬಣ್ಣದ ಟಿಕ್ ಕಂಡುಬಂದಿದೆ ಅಂದರೆ ಆ ಮೆಸೇಜ್ನ್ನು ವ್ಯಕ್ತಿಯು ನೋಡಿದ್ದಾರೆ ಎಂದರ್ಥ. ಇದನ್ನ ಹೊರತುಪಡಿಸಿ ಮಿಕ್ಕೆಲ್ಲ ಮಾಹಿತಿ ಕೇವಲ ಒಂದು ವದಂತಿಯಾಗಿದೆ.