ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಭಾರಿ ಚರ್ಚೆ ನಡುವೆಯೇ ಇದೀಗ ಸಚಿವ ಸಿ.ಪಿ.ಯೋಗೇಶ್ವರ್ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಬಿಜೆಪಿ ಸರ್ಕಾರವಾಗಿ ಉಳಿದಿಲ್ಲ, ಮೂರು ಪಕ್ಷಗಳ ಹೊಂದಾಣಿಕೆ ಸರ್ಕಾರದಂತಿದೆ ಎಂದು ಹೇಳಿದ್ದಾರೆ.
ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ಬೆನ್ನಲ್ಲೇ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯೋಗೇಶ್ವರ್, ಸಿಎಂ ಬದಲಾವಣೆ ಚರ್ಚೆ ಯಾಕೆ ಬಂತು ಗೊತ್ತಿಲ್ಲ. ನನಗೆ ಅಂತಹ ಮೂಲ ಉದ್ದೇಶವೂ ಇಲ್ಲ. ಆದರೆ ನನ್ನ ಸಚಿವಗಾರಿಕೆಯನ್ನು ನನ್ನ ಮಗ ಚಲಾಯಿಸುವುದನ್ನು ನಾನು ಇಷ್ಟಪಡಲ್ಲ. ನನ್ನ ಇಲಾಖೆಯಲ್ಲಿ ಬೇರೊಬ್ಬರು ಹಸ್ತಕ್ಷೇಪ ಮಾಡುವುದನ್ನು ನಾನು ಸಹಿಸಲ್ಲ. ಈ ಬಗ್ಗೆ ಎಲ್ಲರೂ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ನನಗೆ ಕೆಲ ಸಮಸ್ಯೆಗಳಾಗುತ್ತಿದೆ. ಇದನ್ನು ನಾನು ಮಾಧ್ಯಮಗಳ ಮುಂದೆ ಚರ್ಚಿಸಲಾಗದು, ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸುತ್ತೇನೆ ಎಂದರು. ಈ ಮೂಲಕ ಪರೋಕ್ಷವಾಗಿ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಟಾಂಗ್ ನೀಡಿದ್ದಾರೆ.
ಬ್ಲಾಕ್ ಫಂಗಸ್ ಗೆ ʼರಾಮಬಾಣʼವಾಗಿರುವ Amphotericin B ಇಂಜೆಕ್ಷನ್ 1200 ರೂ. ಗಳಿಗೆ ಲಭ್ಯ
ಅಲ್ಲದೆ ರಾಜ್ಯ ಸರ್ಕಾರ ಬಿಜೆಪಿ ಸರ್ಕಾರವಾಗಿ ಉಳಿದಿಲ್ಲ. ಮೂರು ಪಾರ್ಟಿಗಳ ಸರ್ಕಾರದಂತಿದೆ. ಇದನ್ನು ಈ ಹಿಂದೆ ನಾನು ಸಿಎಂ ಅವರಿಗೂ ಹೇಳಿದ್ದೆ. ನಮ್ಮ ಸರ್ಕಾರ ಬಿಜೆಪಿ ಸರ್ಕಾರದಂತೆ ಕಾಣುತ್ತಿಲ್ಲ. ಮೂರು ಪಕ್ಷದ ಹೊಂದಾಣಿ ಸರ್ಕಾರದಂತೆ ಕಾಣುತ್ತಿದೆ ಎಂದು. ನಾನು ದೆಹಲಿಗೆ ಹೋಗಿದ್ದಕ್ಕೂ ನಾಯಕತ್ವ ಬದಲಾವಣೆ ಚರ್ಚೆಗೂ ಸಂಬಂಧವಿಲ್ಲ. ಪಕ್ಷದ ಕೆಲ ಸ್ನೇಹಿತರು ನನ್ನ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಉತ್ತರಿಸುತ್ತೇನೆ ಎಂದರು.