ನವದೆಹಲಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) 2020 -21 ನೇ ಶೈಕ್ಷಣಿಕ ವರ್ಷದಿಂದ ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಪದವಿ ನೀಡಲು ಕಾಲೇಜುಗಳಿಗೆ ಅವಕಾಶ ನೀಡಿದೆ.
ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ, ಗುಜರಾತಿ ಸೇರಿದಂತೆ 8 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಪದವಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅವರ ಕನಸುಗಳನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗಲಿದೆ.
ಇಂಗ್ಲಿಷ್ ಭಯದಿಂದಾಗಿ ಇಂತಹ ಕೋರ್ಸ್ ಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದೂರ ಉಳಿಯುತ್ತಿದ್ದರು. ಜರ್ಮನಿ, ಫ್ರಾನ್ಸ್, ಜಪಾನ್, ರಷ್ಯಾ, ಚೀನಾದಂತಹ ಅನೇಕ ಮುಂದುವರೆದ ದೇಶಗಳು ತಮ್ಮ ಅಧಿಕೃತ ಭಾಷೆಗಳಲ್ಲಿ ಸಂಪೂರ್ಣ ಶಿಕ್ಷಣ ನೀಡುತ್ತವೆ.
ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮೂಲಭೂತ ಅಂಶಗಳನ್ನು ಉತ್ತಮ ರೀತಿಯಲ್ಲಿ ಗ್ರಹಿಸಬಹುದಾಗಿದೆ ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬೋಧೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 11 ಭಾಷೆಗಳಲ್ಲಿ ಯುಜಿ ಇಂಜಿನಿಯರಿಂಗ್ ಕೋರ್ಸುಗಳನ್ನು ಆರಂಭಿಸಲು ಯೋಜಿಸಲಾಗಿದೆ.