ಅರಬ್ ರಾಷ್ಟ್ರಗಳಲ್ಲಿ ಭಾರತೀಯ ವಿಮಾನಯಾನಗಳಿಗೆ ಇರುವ ನಿರ್ಬಂಧನೆಗಳನ್ನ ಗಮನದಲ್ಲಿರಿಸಿ ವಿಮಾನವೊಂದು ಕೇವಲ ಒಬ್ಬ ಭಾರತೀಯ ಪ್ರಯಾಣಿಕನನ್ನ ಹೊತ್ತು ದುಬೈಗೆ ಸಾಗಿದ ವಿಲಕ್ಷಣ ಘಟನೆ ವರದಿಯಾಗಿದೆ.
350 ಪ್ರಯಾಣಿಕರನ್ನ ಕರೆದುಕೊಂಡು ಹೋಗಬಲ್ಲ ಸಾಮರ್ಥ್ಯ ಹೊಂದಿದ್ದ ಎಮಿರೇಟ್ಸ್ ಏರ್ಲೈನ್ಸ್ ಬೋಯಿಂಗ್ ಮೇ 19ರಂದು ಕೇವಲ ಒಬ್ಬ ಪ್ರಯಾಣಿಕರನ್ನ ಹೊತ್ತು ಮುಂಬೈನಿಂದ ಹೊರಟಿದೆ. ಭಾರತೀಯ ಪ್ರಯಾಣಿಕರಿಗೆ ವಿಧಿಸಲಾದ ನಿರ್ಬಂಧಗಳನ್ನ ಗಮನದಲ್ಲಿರಿಸಿ ಒಂದೇ ಪ್ರಯಾಣಿಕನನ್ನ ಕರೆದುಕೊಂಡು ಹೋಗಲಾಗಿದೆ.
40 ವರ್ಷದ ಉದ್ಯಮಿ ಭವೇಶ್ ಜವೇರಿ ಎಂಬವರು 18 ಸಾವಿರ ರೂಪಾಯಿ ಮೌಲ್ಯದಲ್ಲಿ ಮುಂಬೈನಿಂದ ದುಬೈಗೆ ಟಿಕೆಟ್ ಬುಕ್ ಮಾಡಿದ್ದರು. ಜವೇರಿ ದುಬೈನಲ್ಲಿ ಕಚೇರಿಯನ್ನ ಹೊಂದಿರುವ ಸ್ಟಾರ್ಜೆಮ್ಸ್ ಗ್ರೂಪ್ನ ಸಿಇಓ ಆಗಿದ್ದಾರೆ. ಹೀಗಾಗಿ ಇವರಿಗೆ ಈ ವಿಶೇಷ ವಿಮಾನಯಾನ ಸೌಲಭ್ಯ ನೀಡಲಾಗಿದೆ.
ವಿಮಾನದ ಬಳಿಗೆ ಭವೇಶ್ ಬರುತ್ತಿದ್ದಂತೆಯೇ ಸಿಬ್ಬಂದಿ ಚಪ್ಪಾಳೆ ತಟ್ಟುತ್ತಾ ಸ್ವಾಗತ ಕೋರಿದ್ದಾರೆ. ಪ್ರಯಾಣದ ಮಾರ್ಗದುದ್ದಕ್ಕೂ ಭವೇಶ್ ಏರ್ಲೈನ್ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ.
ಅರಬ್ ರಾಷ್ಟ್ರಗಳು ವಿಧಿಸಿರುವ ವಿಮಾನಯಾನ ಪ್ರಯಾಣ ನಿರ್ಬಂಧದ ಪ್ರಕಾರ, ಕೆಲವೇ ಕೆಲವು ಪ್ರಯಾಣಿಕರು ಮಾತ್ರ ದುಬೈಗೆ ಪ್ರಯಾಣ ಬೆಳೆಸಬಹುದಾಗಿದೆ. ಯುಎಇ ಗೋಲ್ಡನ್ ವೀಸಾ, ಯುಎಇ ಪ್ರಜೆಗಳಿಗೆ ವಿಮಾನಯಾನ ನಿರ್ಬಂಧದಿಂದ ವಿನಾಯ್ತಿ ನೀಡಲಾಗಿದೆ. ವಾಣಿಜ್ಯ ವಿಮಾನದಲ್ಲಿ ಪ್ರಯಾಣ ಬೆಳೆಸುವ ಈ ವಿಶೇಷ ಪ್ರಯಾಣಿಕರು ಕೊರೊನಾ ನೆಗೆಟಿವ್ ವರದಿ ಹೊಂದೋದು ಕಡ್ಡಾಯವಾಗಿದೆ.