ನವದೆಹಲಿ: ಸಿಬಿಐ ನಿರ್ದೇಶಕರಾಗಿ ಮಹಾರಾಷ್ಟ್ರದ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಸ್ತುತ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(CISF) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1985 ನೇ ಬ್ಯಾಚ್ ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಸುಬೋಧ್ ಕುಮಾರ್ ಅವರನ್ನು ಸಿಬಿಐ ನೂತನ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ವಿ. ರಮಣ ಮತ್ತು ಲೋಕಸಭೆಯ ಕಾಂಗ್ರೆಸ್ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ತಂಡ ಸುಬೋಧ್ ಕುಮಾರ್ ಅವರನ್ನು ಆಯ್ಕೆ ಮಾಡಿದೆ.
2021 ರ ಫೆಬ್ರವರಿ 2 ರಿಂದ ಆರ್.ಕೆ. ಶುಕ್ಲಾ ನಿವೃತ್ತಿಯಾದ ನಂತರದಲ್ಲಿ ಸಿಬಿಐ ನಿರ್ದೇಶಕರ ಹುದ್ದೆ ತೆರವಾಗಿತ್ತು. ಈ ಹುದ್ದೆಗೆ 109 ಅಧಿಕಾರಿಗಳ ಹೆಸರನ್ನು ಪರಿಗಣಿಸಿ ಮೂವರ ಹೆಸರನ್ನು ಸಮಿತಿ ಆಯ್ಕೆ ಮಾಡಿದ್ದು, ಕೊನೆಗೆ ಸುಬೋಧ್ ಕುಮಾರ್ ಅವರ ಹೆಸರನ್ನು ಮುಂದಿನ 2 ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ.