ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಕ್ಕಳ ಶಾಲಾ ಶುಲ್ಕ ಇಳಿಕೆ ಮಾಡಲು ಅನೇಕ ಶಾಲೆಗಳ ಆಡಳಿತ ಮಂಡಳಿಗಳು ತೀರ್ಮಾನ ಕೈಗೊಂಡಿವೆ.
ಕಳೆದ ಬಾರಿ ರಾಜ್ಯ ಸರ್ಕಾರ ಸೂಚನೆ ನೀಡಿದ ನಂತರವೂ ಅನೇಕ ಶಾಲೆಗಳು ಶುಲ್ಕದಲ್ಲಿ ವಿನಾಯಿತಿ ನೀಡಿರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಶುಲ್ಕ ಪಾವತಿಸಿದ ಪೋಷಕರಿಗೆ ಶೇಕಡ 30 ರಷ್ಟು ವಿನಾಯಿತಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೀಡುವುದಾಗಿ ಹೇಳಲಾಗಿತ್ತು. ಆದರೆ, ಈಗ ವಿನಾಯಿತಿಯನ್ನು ನೀಡುತ್ತಿಲ್ಲ.
ಈ ವರ್ಷ ಅನೇಕ ಶಾಲೆಗಳು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲಾ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಿವೆ. ಶುಲ್ಕದಲ್ಲಿ ಶೇಕಡ 20 ರಿಂದ 25 ರಷ್ಟು ವಿನಾಯಿತಿ ನೀಡಲು ತೀರ್ಮಾನ ಕೈಗೊಂಡಿವೆ. ರುಪ್ಸಾ, ಕ್ಯಾಮ್ಸ್, ಕುಸ್ಮಾ, ಐಸಿಎಸ್ಇ, ಸಿಬಿಎಸ್ಇ ಶಾಲಾ ಆಡಳಿತ ಮಂಡಳಿಗಳ ಪ್ರಮುಖರು ವರ್ಚುವಲ್ ಸಭೆ ನಡೆಸಿ ಕೊರೋನಾ ಸಂಕಷ್ಟದ ಹಿನ್ನಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲಾ ಶುಲ್ಕ ದಲ್ಲಿ ಶೇಕಡ 25 ರಷ್ಟು ವಿನಾಯಿತಿ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.