ಮಡಿಕೇರಿ: ಕೇಂದ್ರ ಸರ್ಕಾರ ಜೀವ ವಿಮಾ ಯೋಜನೆಯನ್ನು ಸಮಾಜದಲ್ಲಿನ ಬಡವರು ಮತ್ತು ಕಡಿಮೆ ಆದಾಯ ಗಳಿಸುವ ವರ್ಗದ ಜನರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಿದೆ. ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವ ಉದ್ದೇಶವನ್ನು ಈ ವಿಮೆ ಹೊಂದಿದೆ.
ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ
ಟರ್ಮ್ ವಿಮಾ ಯೋಜನೆಯ ಪ್ರಕಾರ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು 18-50 ವರ್ಷ ವಯಸ್ಸಿನ ಜನರಿಗೆ ಲಭ್ಯವಿರುತ್ತದೆ. ಈ ಸ್ಕೀಂನ ಪ್ರಕಾರ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಒಂದು ನವೀಕರಣ ಮಾಡಬಹುದಾದ ವಿಮೆಯಾಗಿದ್ದು, ಇದರಲ್ಲಿ ವಾರ್ಷಿಕ ಜೀವ ವಿಮಾ ರಕ್ಷಣೆ 2 ಲಕ್ಷ ರೂ. ವಿಮಾದಾರನ ಮರಣದ ಸಂದರ್ಭದಲ್ಲಿ ಕೊಡಲಾಗುತ್ತದೆ. ಅತೀ ಕಡಿಮೆ ಅಂದರೆ ವಾರ್ಷಿಕ ರೂ. 330 ಪ್ರೀಮಿಯಂ ದರದಲ್ಲಿ ಇದನ್ನು ನೀಡಲಾಗುತ್ತದೆ. ಅಲ್ಲದೆ. ಈ ಪ್ರೀಮಿಯಂ ದರವು 18 ರಿಂದ 50 ವರ್ಷ ವಯಸ್ಸಿನ ಎಲ್ಲರಿಗೂ ಒಂದೇ ಸಮನಾಗಿದೆ. ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯನ್ನು ಹೊಂದಿರುವ ವಿಮಾದಾರನ ಮರಣದ ಸಮಯದಲ್ಲಿ ಫಲಾನುಭವಿಗೆ 2 ಲಕ್ಷ ರೂ. ಮರಣ ವ್ಯಾಪ್ತಿಯಲ್ಲಿ ನೀಡುತ್ತದೆ.
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಒಂದು ವರ್ಷದವರೆಗೆ ಕವರೇಜ್ ನೀಡುತ್ತದೆ. ಕೇವಲ ವಾರ್ಷಿಕ 12 ರೂಪಾಯಿಗಳ ಪ್ರೀಮಿಯಂ ಮೊತ್ತವನ್ನು ಹೊಂದಿರುವ ಈ ವಿಮೆಯು ಬಡವರಿಗೆ ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೆ ಬಹಳ ಉಪಯೋಗವಾಗಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ಆಕಸ್ಮಿಕ ಮರಣ ಮತ್ತು ಶಾಶ್ವತ ಪೂರ್ಣ ಅಂಗವೈಕಲ್ಯಕ್ಕೆ 2 ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿಗಳ ಲೈಫ್ ಕವರೇಜ್ ಲಭಿಸುವುದು.
ಎಲ್ಲಾ ಬ್ಯಾಂಕುಗಳು ಮೇ ತಿಂಗಳ ಕೊನೆಯ ವಾರದಲ್ಲಿ, ಅಂದರೆ ಮೇ 24 ರಿಂದ ಮೇ 31 ರ ವರೆಗೆ ಪಿಎಂಜೆಜೆಬಿವೈ ಮತ್ತು ಪಿಎಂಎಸ್ಬಿವೈ ನವೀಕರಣದ ವಾರ್ಷಿಕ ಮೊತ್ತವನ್ನು ಗ್ರಾಹಕರ ಖಾತೆಯಿಂದ ಆಟೋ ಡೆಬಿಟ್ ಮೂಲಕ ಕಡಿತಗೊಳಿಸಲಾಗುತ್ತದೆ. ಆದ್ದರಿಂದ ಗ್ರಾಹಕರು ಮೇ ತಿಂಗಳ ಕೊನೆಯ ವಾರದಲ್ಲಿ ತಮ್ಮ ತಮ್ಮ ಖಾತೆಯಲ್ಲಿ ವಿಮೆಯ ನವೀಕರಣದ ಮೊತ್ತವನ್ನು ಮುಂಚಿತವಾಗಿಯೇ ಖಾತೆಯಲ್ಲಿ ಜಮಾ ಮಾಡಲು ಲೀಡ್ ಬ್ಯಾಂಕ್ ತಿಳಿಸಿದೆ.