ಚೆನ್ನೈ: ಆನ್ಲೈನ್ ಕ್ಲಾಸ್ ವೇಳೆ ಆಘಾತಕಾರಿ ಘಟನೆ ನಡೆದಿದೆ. ತಮಿಳುನಾಡಿನ ಚೆನ್ನೈನ ಕೆಕೆ ನಗರದಲ್ಲಿರುವ ಪದ್ಮ ಶೇಷಾದ್ರಿ ಬಾಲಭವನ ಶಾಲೆಯ ವಿದ್ಯಾರ್ಥಿನಿಯರು, ಹಿರಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಶಾಲೆಯಲ್ಲಿ ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡೀಸ್ ಕಲಿಸುವ ರಾಜಗೋಪಾಲನ್ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ. ಭೌತಿಕ ತರಗತಿಗಳು ನಡೆಯುವ ಸಂದರ್ಭದಲ್ಲಿ ಶಾಲೆಯಲ್ಲಿ ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಶಿಕ್ಷಕ ಲೈಂಗಿಕ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ. ವಿದ್ಯಾರ್ಥಿನಿಯರ ದೇಹ ಸ್ಥಿತಿ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ಎಂದು ಹಳೆಯ-ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ.
ಶಾಲೆಯ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶಿಕ್ಷಕನ ವರ್ತನೆಯ ಬಗ್ಗೆ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಆನ್ಲೈನ್ ಕ್ಲಾಸ್ ವೇಳೆ ಟವೆಲ್ ಸುತ್ತಿಕೊಂಡು ಬಂದಿದ್ದಾರೆ. ಲೈಂಗಿಕ ಸ್ವಭಾವದ ಮುಜುಗರದ ಮತ್ತು ವಿಚಿತ್ರವಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಲ್ಲದೇ, ಶಾಲಾ ಸಿಬ್ಬಂದಿ ಜಾತಿವಾದಿಗಳು ಎಂದು ಅನೇಕರು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಶಿಕ್ಷಕನ ಮಾನ ಹರಾಜಾಗಿದ್ದು, ಘಟನೆ ಬೆಳಕಿಗೆ ಬಂದ ಕೂಡಲೇ ಶಾಲೆಯ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.