ಭಾರತದಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಹೆಚ್ಚಾಗ್ತಿರುವ ಮಧ್ಯೆ ಮೂರನೇ ಅಲೆ ಭಯ ಹುಟ್ಟಿಸಿದೆ. ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ತಜ್ಞರ ಹೇಳಿಕೆ ಪಾಲಕರ ಭಯಕ್ಕೆ ಕಾರಣವಾಗಿದೆ. ಕೋವಿಡ್ – 19ನಿಂದ ಮಕ್ಕಳನ್ನು ರಕ್ಷಿಸಲು ಲಸಿಕೆ ಪ್ರಯೋಗ ನಡೆಯುತ್ತಿದೆ. ಮೂಗಿನ ಮೂಲಕ ಲಸಿಕೆಯ ಎರಡನೇ ಮತ್ತು ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ.
ವರದಿಯ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್, ಭಾರತದಲ್ಲಿ ತಯಾರಾಗುತ್ತಿರುವ ಕೋವಿಡ್ -19 ಲಸಿಕೆ ಮಕ್ಕಳಿಗೆ ಗೇಮ್ ಚೇಂಜರ್ ಎಂದು ಸಾಬೀತುಪಡಿಸಬಹುದು. ಮಕ್ಕಳಿಗೆ ಈ ಲಸಿಕೆ ನೀಡುವುದು ಸುಲಭ. ಇದು ಉಸಿರಾಟದ ನಳಿಕೆ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀಘ್ರದಲ್ಲೇ ಮಕ್ಕಳಿಗೆ ಲಸಿಕೆ ನೀಡುತ್ತೇವೆ ಎಂದವರು ಹೇಳಿದ್ದಾರೆ.
ಲಸಿಕೆಯನ್ನು ಮೂಗಿನ ಮೂಲಕ ನೀಡಲಾಗುತ್ತದೆ. ಇದಕ್ಕಾಗಿ ಸಿರಿಂಜ್ ಅಗತ್ಯವಿಲ್ಲ. ಮೂಗಿನ ಮೂಲಕ ಡೋಸ್ ನೀಡಲಾಗುವುದು. ಕೊವಾಕ್ಸಿನ್ ಕೊರೊನಾ ಲಸಿಕೆ ತಯಾರಿಸುವ ಭಾರತ್ ಬಯೋಟೆಕ್, ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಹಾಯದಿಂದ ಮಕ್ಕಳಿಗೆ ಬಿಬಿವಿ 154 ಮೂಗಿನ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಹೈದರಾಬಾದ್ ಮೂಲದ ಕಂಪನಿಯು ಮೂಗಿನ ಲಸಿಕೆ ಪ್ರಯೋಗವನ್ನು ಮಾಡುತ್ತಿದೆ.
ಕಂಪನಿಯ ಪ್ರಕಾರ, ಕೇವಲ 4 ಹನಿ ಮೂಗಿಗೆ ಹಾಕಲಾಗುತ್ತದೆ. ಮೂಗಿನ ಎರಡೂ ರಂಧ್ರಗಳಿಗೆ ಎರಡು ಹನಿಗಳನ್ನು ಹಾಕಲಾಗುತ್ತದೆ. ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿಯ ಪ್ರಕಾರ, 175 ಜನರಿಗೆ ಮೂಗಿನ ಲಸಿಕೆ ನೀಡಲಾಗಿದೆ. ಅವರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರಾಯೋಗಿಕ ಫಲಿತಾಂಶ ಇನ್ನೂ ಬಂದಿಲ್ಲ.