
ನವದೆಹಲಿ: ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ(WHO) ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. WHO ಅನುಮೋದನೆ ನೀಡದಿದ್ದರೂ ಭಾರತದಲ್ಲಿ ಲಸಿಕೆ ಬಳಕೆ ಮಾಡಲಾಗುತ್ತಿದೆ.
ಈ ಲಸಿಕೆ ಪಡೆದವರು ಇತರೆ ದೇಶಗಳಿಗೆ ಹೋಗಲು ಅಡ್ಡಿಯಾಗುತ್ತದೆ. ವಿಶ್ವಸಂಸ್ಥೆಯ ಅನುಮೋದನೆ ಇಲ್ಲದ ಕಾರಣ ಅಡ್ಡಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೇಗನೆ ಅನುಮೋದನೆ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ.
ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ ಎನ್ನುವುದು ಸಾಬೀತಾಗಿರಬಹುದು. ಸಾಕಷ್ಟು ಪರಿಣಾಮಕಾರಿತ್ವವನ್ನು ಲಸಿಕೆ ಹೊಂದಿರಬಹುದು. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆದುಕೊಳ್ಳದಿರುವುದು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.
ಬೆರಳೆಣಿಕೆಯಷ್ಟು ದೇಶಗಳು ಮಾತ್ರ ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರಿಗೆ ಪ್ರವೇಶಕ್ಕೆ ಅನುಮತಿ ನೀಡುತ್ತವೆ ಎಂದು ದೃಢಪಡಿಸಲಾಗಿದೆ. ಇದುವರೆಗೆ 2 ಕೋಟಿ ಭಾರತೀಯರಿಗೆ ನೀಡಲಾಗಿರುವ ಸ್ಥಳೀಯವಾಗಿ ತಯಾರಿಸಿದ ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವಿದೇಶಾಂಗ ಕಾರ್ಯದರ್ಶಿ ಹರ್ಶ್ ಶ್ರೀಂಗ್ಲಾ ಅವರು ಪ್ರಯತ್ನ ನಡೆಸಿದ್ದಾರೆ.
ಸೋಮವಾರ ಕೊವ್ಯಾಕ್ಸಿನ್ ತಯಾರಕ ಭಾರತ್ ಬಯೋಟೆಕ್ ಕಂಪನಿಯೊಂದಿಗೆ ಅವರು ಸಭೆ ಪ್ರಯತ್ನ ನಡೆಸಲಿದ್ದಾರೆ. ಅಮೆರಿಕ ಮತ್ತು ಯುರೋಪಿನ ಅನೇಕ ದೇಶಗಳು ಶೀಘ್ರವೇ ಮತ್ತೆ ತೆರೆಯಲು ಪ್ರಯತ್ನಿಸುತ್ತಿರುವುದರಿಂದ ಕೊವ್ಯಾಕ್ಸಿನ್ ಲಸಿಕೆ ಹಾಕಿಸಿದವರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಈ ದೇಶಗಳು ಪ್ರವೇಶವನ್ನು ನಿರಾಕರಿಸದಂತೆ ಸರ್ಕಾರ ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಕೆಲವು ದೇಶಗಳು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದಿಸಿವೆ. ಆದರೆ, ಲಸಿಕೆ ರಫ್ತಿಗೆ ಸಿದ್ಧವಾದ ನಂತರ ಇನ್ನೂ ಅನೇಕ ದೇಶಗಳು ಅನುಸರಿಸುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೊವ್ಯಾಕ್ಸಿನ್ ಅನುಮೋದನೆ ಪಡೆಯುವುದು ಬಾಕಿ ಉಳಿದಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸರ್ಕಾರ ಭಾರತ್ ಬಯೋಟೆಕ್ ಜೊತೆಗೂಡಿ ಕೆಲಸ ಮಾಡಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ತುರ್ತು ಬಳಕೆಯ ಅನುಮೋದನೆಗಾಗಿ ಕೊವ್ಯಾಕ್ಸಿನ್ ಆಮದು ಮಾಡಿಕೊಳ್ಳಲು ದೇಶಗಳನ್ನು ಉತ್ತೇಜಿಸುವ ಸಾಧ್ಯತೆ ಇದೆ. ವಿದೇಶದಲ್ಲಿ ಕೊವ್ಯಾಕ್ಸಿನ್ ಉತ್ಪಾದನೆಗೆ ಒತ್ತು ನೀಡಲಾಗುವುದು ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆದ ನಂತರವೇ ಶ್ರೀಲಂಕಾದಲ್ಲಿ ಚೀನಾದ ಸಿನೋಫಾರ್ಮ್ ಲಸಿಕೆಯನ್ನು ನೀಡಲಾರಂಭಿಸಲಾಯಿತು. 40 ಹೆಚ್ಚು ದೇಶಗಳು ಕೊವ್ಯಾಕ್ಸಿನ್ ಬಗ್ಗೆ ಆಸಕ್ತಿ ತೋರಿವೆ. ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿಗಾಗಿ ಲಸಿಕೆಯನ್ನು ದೃಢಪಡಿಸಲಾಗಿದೆ ಎಂದು ಹೇಳಲಾಗಿದೆ.