ಭಾರತದಲ್ಲಿ ತಯಾರಾಗುತ್ತಿರುವ ಮೂಗಿನ ಲಸಿಕೆಗಳು(Nasal Vaccines) ಕೊರೊನಾ ಮೂರನೇ ಅಲೆ ವೇಳೆಯಲ್ಲಿ ಮಕ್ಕಳಿಗೆ ಗೇಮ್ ಚೇಂಜರ್ ಆಗಬಹುದು. ಆದರೆ ಈ ವರ್ಷ ಲಸಿಕೆ ಸಿಗುವ ಸಾಧ್ಯತೆಗಳಿಲ್ಲ. ಹಾಗಾಗಿ ಸುರಕ್ಷತೆ ವಹಿಸುವುದು ಮುಖ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಕೊರೊನಾ ಸಾಂಕ್ರಾಮಿಕ ರೋಗದ ಮೂರನೇ ಅಲೆ ಆತಂಕದ ಮಧ್ಯೆ ಇಂತಹುದೊಂದು ಭರವಸೆ ಸಿಕ್ಕಿದೆ. ಭಾರತದಲ್ಲಿ ತಯಾರಾಗಲಿರುವ ನೇಸಲ್ ವ್ಯಾಕ್ಸಿನ್ ಮಕ್ಕಳ ಮೇಲಿನ ಪರಿಣಾಮದ ಗೇಮ್ ಚೇಂಜರ್ ಆಗಿರಬಹುದು ಎಂದು ಹೇಳಲಾಗುತ್ತಿದೆ.
ನಿರ್ವಹಣೆಗೆ ಸುಲಭವಾದ, ಉಸಿರಾಟದ ಸ್ಥಳದಲ್ಲಿ ವಿನಾಯಿತಿ ನೀಡುವ ಲಸಿಕೆ ಇದಾಗಿದೆ ಎಂದು ಅವರು ತಿಳಿಸಿದ್ದಾರೆ. ಮಕ್ಕಳಿಗೆ ನೇಸಲ್ ವ್ಯಾಕ್ಸಿನ್ ಬರುವವರೆಗೆ ಹೆಚ್ಚು ಹೆಚ್ಚು ವಯಸ್ಕರಿಗೆ ವಿಶೇಷವಾಗಿ ಶಿಕ್ಷಕರಿಗೆ ಲಸಿಕೆ ಹಾಕುವ ಅವಶ್ಯಕತೆ ಇದೆ. ಸಮುದಾಯದ ಪ್ರಸರಣದ ಅಪಾಯ ಕಡಿಮೆಯಾದಾಗ ಮಾತ್ರ ಶಾಲೆಗಳನ್ನು ಪ್ರಾರಂಭಿಸಬೇಕು. ಮಕ್ಕಳಿಗೆ ಲಸಿಕೆ ಸಿಗಲಿದೆ ಎಂಬ ಭರವಸೆ ಹೊಂದಿದ್ದೇನೆ. ಆದರೆ ಅದು ಈ ವರ್ಷಕ್ಕೆ ಲಭ್ಯವಾಗದಿರಬಹುದು ಎಂದು ಅವರು ಹೇಳಿದ್ದಾರೆ.
ಸಮುದಾಯ ಪ್ರಸರಣ ಕಡಿಮೆಯಾದಾಗ ಶಾಲೆಗಳನ್ನು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತೆರೆಯಬೇಕಿದೆ. ಅನೇಕ ದೇಶಗಳು ಅದನ್ನೇ ಮಾಡಿವೆ. ಶಿಕ್ಷಕರಿಗೆ ಲಸಿಕೆ ಹಾಕಿದರೆ ಅದೊಂದು ದೊಡ್ಡ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳು ಸೋಂಕಿನಿಂದ ಪ್ರತಿರಕ್ಷಿತರಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದರ ಪರಿಣಾಮ ಕಡಿಮೆ ಇದೆ, ಮಕ್ಕಳು ಕೋವಿಡ್ ನಿಂದ ಪ್ರಭಾವಿತರಾದಾಗ ಅನೇಕರಲ್ಲಿ ಯಾವುದೇ ಲಕ್ಷಣ ಕಂಡು ಬರುವುದಿಲ್ಲ. ಇಲ್ಲವೇ ಕನಿಷ್ಠ ಲಕ್ಷಣಗಳು ಕಂಡುಬರುತ್ತವೆ. ಮಕ್ಕಳಿಗೆ ಸಾಮಾನ್ಯವಾಗಿ ಆಸ್ಪತ್ರೆ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ. ಪೌಲ್ ಹೇಳಿದ್ದಾರೆ ಮಕ್ಕಳಲ್ಲಿ ಕೋವಿಡ್ ಚಿಕಿತ್ಸೆಗೆ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು ಎಂದು ಅವರು ತಿಳಿಸಿದ್ದಾರೆ.