ಹುಬ್ಬಳ್ಳಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಫಂಗಸ್ ಎಕ್ಸ್ ಪರ್ಟ್ ಗಳನ್ನೊಳಗೊಂಡ ಐವರ ಸಮಿತಿ ರಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, ಬ್ಲ್ಯಾಕ್, ವೈಟ್ ಫಂಗಸ್ ಎಂಬುದಿಲ್ಲ. ಫಂಗಸ್ ಇನ್ಫೆಕ್ಷನ್ ಇದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಇಂಜಕ್ಷನ್ ಹಂಚಿಕೆ ಮಾಡಲಾಗುತ್ತಿದೆ. ರೋಗಿಗಳಿಗೆ ಉಚಿತ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಮಿತಿ ನೀಡಿದ ಪ್ರಾಥಮಿಕ ಮಾಹಿತಿ ಪ್ರಕಾರ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಹ್ಯುಮಿಡಿಫೈಯರ್ ಗಳಿಗೆ ಡಿಸ್ಟಿಲ್ಡ್ ನೀರಿನ ಬದಲು ನಲ್ಲಿ ನೀರನ್ನು ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಅತಿಯಾದ ಸ್ಟಿರಾಯ್ಡ್, ಆಕ್ಸಿಜನ್ ಪಡೆದವರಲ್ಲೇ ಹೆಚ್ಚಾಗಿ ಈ ಫಂಗಸ್ ಪತ್ತೆಯಾಗಿದೆ. ರಾಜ್ಯದಲ್ಲಿ ವರ್ಷಕ್ಕೆ 10 ಜನರಲ್ಲಿ ಫಂಗಸ್ ಇನ್ ಫೆಕ್ಷನ್ ಕಂಡುಬರುತ್ತಿತ್ತು. ಅದರೆ ಈಗ ಜಿಲ್ಲೆಗಳಲ್ಲೇ 10ಕ್ಕು ಹೆಚ್ಚು ಜನರಲ್ಲಿ ಪತ್ತೆಯಾಗುತ್ತಿದೆ ಎಂದು ಹೇಳಿದರು.