ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ನೀಡಲಾಗುವ ಲಸಿಕೆ ಕೇವಲ ಸಿಬ್ಬಂದಿಗೆ ಮಾತ್ರ ಸೀಮಿತವಾಗಿರಬೇಕು. ಈ ಅಭಿಯಾನದಲ್ಲಿ ಸಿಬ್ಬಂದಿ ಪರಿವಾರದವರನ್ನ ಸೇರಿಸಿಕೊಳ್ಳುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಚೇರಿಗಳಲ್ಲಿ ಕೆಲಸ ಮಾಡುವ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ ಈ ನಿಯಮದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ ಎಂದು ಉದ್ಯೋಗ ಮಂಡಳಿಗಳು ಹಾಗೂ ಐಟಿ ಕಂಪನಿಗಳು ಮಾಹಿತಿ ನೀಡಿವೆ. ಇದು ಮಾತ್ರವಲ್ಲದೇ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಕೆಲ ಗೊಂದಲವಿದ್ದು ಈ ಬಗ್ಗೆ ಸ್ಪಷ್ಟನೆ ಕೋರಿ ಅನೇಕ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಪತ್ರವನ್ನ ಬರೆದಿವೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕಂಪನಿಯೊಂದರ ಎಕ್ಸಿಕ್ಯುಟಿವ್, ಒಂದು ವೇಳೆ ಈ ನಿರ್ದೇಶನಗಳು ಜಾರಿಗೆ ಬಂದಿದ್ದರೆ, ಜನರಿಗೆ ಬೇರೆ ಕೇಂದ್ರಗಳಲ್ಲಿ ಲಸಿಕೆಗೆ ಅಪಾಯಿಂಟ್ಮೆಂಟ್ ಆದರೂ ಸಿಕ್ಕಿರುತ್ತಿತ್ತು. ಆದರೆ ಈಗ 18ಕ್ಕಿಂತ ಮೇಲ್ಪಟ್ಟವರಿಗೆ ಇದು ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಈ ನಿರ್ದೇಶನದಿಂದಾಗಿ ಕಾರ್ಪೋರೇಟ್ ಕಂಪನಿಗಳು ಹಾಗೂ ಸರ್ಕಾರದ ನಡುವಿನ ಒಡಂಬಡಿಕೆಯಲ್ಲಿ ಯಾವುದೇ ತೊಂದರೆ ಆಗದೇ ಇರಬಹುದು. ಆದರೆ ಕಚೇರಿಗಳಲ್ಲಿ ನಡೆಯುತ್ತಿದ್ದ ಲಸಿಕೆ ಅಭಿಯಾನದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತೆ. ಸಣ್ಣ ಪಟ್ಟಣಗಳಲ್ಲಿ ಆಸ್ಪತ್ರೆ ಕೊರತೆಯಿಂದಾಗಿ ಕಚೇರಿಗಳಲ್ಲೇ ಲಸಿಕೆ ಅಭಿಯಾನ ನಡೆಯುತ್ತಿತ್ತು. ಇಂತಹ ಪಟ್ಟಣಗಳಲ್ಲಿ ನಿಜಕ್ಕೂ ಸಮಸ್ಯೆ ಉಂಟಾಗಲಿದೆ ಎಂದು ಪ್ರತಿಷ್ಠಿತ ಕಂಪನಿಯೊಂದು ಹೇಳಿದೆ.
ಈ ರೀತಿಯ ಹೊಸ ನಿಯಮದ ಬಗ್ಗೆ ಸರ್ಕಾರ ಯಾವುದೇ ಕಾರಣ ನೀಡಿಲ್ಲ. ಆದರೆ ಲಸಿಕೆ ಕೊರತೆಯಿಂದ ಈ ರೀತಿ ನಿಯಮ ಬಂದಿರಬಹುದು ಎಂದು ಅಂದಾಜಿಸಲಾಗ್ತಿದೆ. ಆದರೆ ಕುಟುಂಬಸ್ಥರಿಗೆ ಲಸಿಕೆ ಸಿಗದ ಕಾರಣ ಸಿಬ್ಬಂದಿ ಲಸಿಕೆ ಅಭಿಯಾನದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಕಂಪನಿಗಳು ಆತಂಕ ಹೊರಹಾಕಿವೆ.