ಬೆಂಗಳೂರು: ಸಹಕಾರ ಸಂಘಗಳಲ್ಲಿ ರೈತರು ಪಡೆದುಕೊಂಡ ಸಾಲವನ್ನು ಜೂನ್ 30 ರೊಳಗೆ ಮರು ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ ನೆರವಿನ ಪ್ಯಾಕೇಜ್ ಘೋಷಣೆ ಮಾಡುವ ಸಂದರ್ಭದಲ್ಲಿ ರೈತರು ಪಡೆದ ಸಾಲವನ್ನು ಮರುಪಾವತಿಸಲು ಜುಲೈ ಅಂತ್ಯದವರೆಗೆ ಗಡುವು ವಿಸ್ತರಿಸುವುದಾಗಿ ಹೇಳಿದ್ದರು. ಆದರೆ, ಶುಕ್ರವಾರ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, 2021 ರ ಜೂನ್ 30 ರೊಳಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಮರುಪಾವತಿಸುವಂತೆ ತಿಳಿಸಲಾಗಿದೆ.
3 ಲಕ್ಷ ರೂಪಾಯಿ ಒಳಗಿನ ಶೂನ್ಯ ಬಡ್ಡಿ ದರದ ಸಾಲ ಹಾಗೂ ಶೇಕಡ 3 ರಷ್ಟು ಬಡ್ಡಿದರದ 10 ಲಕ್ಷ ರೂಪಾಯಿವರೆಗಿನ ಮಧ್ಯಮಾವಧಿ, ದೀರ್ಘಾವಧಿ ಕೃಷಿ, ಕೃಷಿ ಸಂಬಂಧಿತ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ನೀಡುವ ಯೋಜನೆಯಲ್ಲಿ 2021 ಏಪ್ರಿಲ್ 1 ರಿಂದ 2021 ಜೂನ್ 30 ರವರೆಗೆ ಗಡುವು ಇರುವ ಸಾಲ, ಸಾಲದ ಕಂತುಗಳನ್ನು ಜೂನ್ 30 ರೊಳಗೆ ಪಾವತಿಸುವಂತೆ ತಿಳಿಸಲಾಗಿದೆ.
ರೈತರು, ಸ್ವಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಗಳು, ಭೂ ಅಭಿವೃದ್ಧಿ ಬ್ಯಾಂಕ್ ಗಳಿಂದ ಸಾಲ ಪಡೆದಿರುವ ರೈತರ ಸಣ್ಣ ಮತ್ತು ಮಧ್ಯಮ ಗಾತ್ರದ ಸಾಲ ಮರುಪಾವತಿ ದಿನಾಂಕ 31.7.2021 ರವರೆಗೆ ಮೂರು ತಿಂಗಳು ಸಮಯವಿದೆ ಎಂದುಕೊಂಡಿದ್ದ ರೈತರು ಈಗ ಜೂನ್ 30 ರೊಳಗೆ ಸಾಲ ಮರುಪಾವತಿಸಬೇಕಿದೆ. ಇಲ್ಲವೇ ನವೀಕರಣ ಮಾಡಿಕೊಳ್ಳಬೇಕಿದೆ ಎಂದು ಹೇಳಲಾಗಿದೆ.