ಬೆಂಗಳೂರು: ಭೌತಿಕ ತರಗತಿ ಆರಂಭವಾಗುವವರೆಗೆ ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಮುಂದುವರೆಸಲಾಗುವುದು.
ಉನ್ನತ ಶಿಕ್ಷಣ ಸಚಿವರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಈ ಬಗ್ಗೆ ಮಾಹಿತಿ ನೀಡಿದ್ದು, ಭೌತಿಕ ತರಗತಿ ಆರಂಭಿಸುವವರೆಗೆ ರಾಜ್ಯದ ವಿವಿಧ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಕಾಲೇಜುಗಳ ಪದವಿ ಕೋರ್ಸ್ ಗಳು 2, 4, 6, 8 ಸೆಮಿಸ್ಟರ್ ಗಳಿಗೆ ಆನ್ಲೈನ್ ತರಗತಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ.
ಬಹುತೇಕ ಕೋರ್ಸುಗಳಿಗೆ ಕ್ಯಾರಿ ಓವರ್ ಪದ್ಧತಿ ಅನ್ವಯವಾಗುತ್ತದೆ. ಹೀಗಾಗಿ ಪದವಿ ಕೋರ್ಸುಗಳ ಬೆಸ ಸ್ಥಾನಿಕ ಸಮಿಸ್ಟರ್ ಗಳಿಗೆ 1, 3, 5, 7 ಕೊರೋನಾ ಪರಿಸ್ಥಿತಿ ಸುಧಾರಿಸಿದ ನಂತರ ಪರೀಕ್ಷೆ ನಡೆಸಲಾಗುವುದು. ಬೆಸ ಸ್ಥಾನಿಕ ಸೆಮಿಸ್ಟರ್ ಗಳಿಗೆ ಪರೀಕ್ಷೆ ನಡೆಸದ ವಿವಿ ಮತ್ತು ಕಾಲೇಜುಗಳು ಕೂಡ ಸಮಸ್ಥಾನಿಕ 2, 4, 6, 8 ಸೆಮಿಸ್ಟರ್ ಗಳ ಆನ್ಲೈನ್ ತರಗತಿ ಆರಂಭಿಸಬೇಕು ಎಂದು ಹೇಳಲಾಗಿದೆ.
ಕೆಲವು ಇಂಜಿನಿಯರಿಂಗ್ ಮತ್ತು ವೃತ್ತಿಪರ ಕೋರ್ಸ್ ಗಳಲ್ಲಿ ಮಾತ್ರ ಮುಂದಿನ ಸೆಮಿಸ್ಟರ್ ಗೆ ಹೋಗಲು ಕ್ಯಾರಿಓವರ್ ಪದ್ಧತಿ ಅನ್ವಯವಾಗಲ್ಲ. ಅಂತಹ ಕೋರ್ಸುಗಳ ಬಗ್ಗೆ ಕುಲಪತಿಗಳು ಮತ್ತು ಉನ್ನತ ಶಿಕ್ಷಣ ಪರಿಷತ್ ಜೊತೆಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.